ಹುಬ್ಬಳ್ಳಿ: ಶ್ರೀಗಂಧದ ಮರದ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಜಿಲ್ಲಾಧಿಕಾರಿಗಳ ಮನೆಯ ಆವರಣದಲ್ಲಿ ಶ್ರೀಗಂಧ ಮರಗಳ ಕಳ್ಳತನ ಪ್ರಕರಣ ಮಾಸುವ ಮುನ್ನವೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಾಗಿದ್ದರೇ ಘಟನೆ ನಡೆದಿದ್ದಾದರೂ ಎಲ್ಲಿ ಆಗಿದ್ದಾದರೂ ಏನು ಅಂತೀರಾ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಪೋಟಕ ಮಾಹಿತಿ.
ವಾಣಿಜ್ಯನಗರಿ ಹುಬ್ಬಳ್ಳಿ ವಾರ್ಡ್ ನಂಬರ 55ರಲ್ಲಿ ಬರುವ ಕೆ.ಎಚ್.ಬಿ ಕಾಲೋನಿಯಲ್ಲಿ ಶಿವಶಂಕರ ಐಹೊಳೆ ಎಂಬುವವರ ಮನೆಯ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧ ಮರವೊಂದನ್ನು ಕಳ್ಳರು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ತಲಾವಾರು, ಬಾಟಲ್ ಸೇರಿದಂತೆ ಹಲವಾರು ಉಪಕರಣಗಳಿಂದ ಸ್ಥಳೀಯರಿಗೆ ಆತಂಕವನ್ನುಂಟು ಮಾಡಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ರಾತ್ರಿ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹದಿನೈದು ಫುಟ್ ಎತ್ತರದ ಶ್ರೀಗಂಧದ ಮರವನ್ನು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ಸುಮಾರು ದಿನಗಳಿಂದ ಚಂದನ ಕಳ್ಳತನ ಪ್ರಕರಣ ಎಗ್ಗಿಲ್ಲದೇ ನಡೆಯುತ್ತಿದ್ದರೂ ಕೂಡ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ.
ಇನ್ನೂ ಕಳ್ಳರ ಕೈಚಳಕದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಪೋಲೀಸರು ಹಾಗೂ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆ.ಎಚ್.ಬಿ ಕಾಲೋನಿಯಲ್ಲಿ ಮಹಾನಗರ ಪಾಲಿಕೆಯಿಂದ ಯಾವುದೇ ಸಿಸಿ ಟಿವಿ ಅಳವಡಿಸದೇ ಇರುವುದರಿಂದ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂಬುವುದು ಸ್ಥಳೀಯರ ಆರೋಪವಾಗಿದೆ.
ಒಟ್ಟಿನಲ್ಲಿ ಪ್ರಖ್ಯಾತಿ ಕುಖ್ಯಾತಿಗಳೆರಡನ್ನು ಶ್ರೇಣೀಕೃತ ಹಂತದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರವ ಅವಳಿ ನಗರದಲ್ಲಿ ಕಳ್ಳತನ ಪ್ರಕರಣಗಳಿಗೆ ಲಗಾಮ ಇಲ್ಲದಂತಾಗಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ತಕ್ಷಣವೇ ಸೂಕ್ತ ಕ್ರಮಗಳನ್ನು ಜಾರಿಗೊಳಿಸಿ ಇಂತಹ ಪ್ರಕರಣಕ್ಕೆ ಬ್ರೇಕ್ ಹಾಕಬೇಕಿದೆ.
Kshetra Samachara
07/03/2022 07:19 pm