ಹುಬ್ಬಳ್ಳಿ: ಬಹುಶಃ ವಾಣಿಜ್ಯ ನಗರಿ ಹುಬ್ಬಳ್ಳಿಯ ಪೊಲೀಸರು ಇತಿಹಾಸದಲ್ಲಿಯೇ ಇದೊಂದು ಮಹತ್ತರವಾದ ಕಾರ್ಯಸಾಧನೆ ಎನ್ನಬಹುದು. ಏಕಕಾಲಕ್ಕೆ ಇಷ್ಟೊಂದು ಕಾರುಗಳನ್ನು ವಶಕ್ಕೆ ಪಡೆದಿದ್ದಲ್ಲದೇ, ನಟೋರಿಯಸ್ ಟೀಮ್‍ನ್ನು ಬಂಧಿಸಿದ ಖ್ಯಾತಿ ಕೇಶ್ವಾಪುರ ಠಾಣೆಯ ಪೊಲೀಸರದ್ದಾಗಿದೆ. ಮೇಲ್ನೋಟಕ್ಕೆ ಇದೊಂದು ಸಾದಾ ಕಾರು ಕಳ್ಳತನ ಪ್ರಕರಣದಂತೆ ಕಾಣಬಹುದು. ಕೇಶ್ವಾಪುರ ಪೊಲೀಸರು ಇದನ್ನು ಭೇದಿಸಿದ್ದಾರೆ ಎಂದು ಹೇಳಿ ಬಿಡಬಹುದು. ಆದರೆ ಇದರ ಹಿಂದಿರುವ ಸಾಹಸ, ಸಾಧನೆ, ರೋಚಕತೆ ನಿಜಕ್ಕೂ ಹೆಮ್ಮೆ ಪಡುವಂತಹದ್ದು.
ಹೌದು,,,, ಕೇಶ್ವಾಪುರ ಪೊಲೀಸರು ಕೇವಲ ಕಾರುಕಳ್ಳರನ್ನಷ್ಟೇ ಅಲ್ಲ, ತಮ್ಮ ಕಾರ್ಯಸಾಧನೆಗೆ ಯಾವುದಕ್ಕೂ ಹೇಸದ, ನೀಚ, ಕ್ರೂರ ನಟೋರಿಯಸ್ ತಂಡವನ್ನೇ ವಶಕ್ಕೆ ಪಡೆದ ಮಹತ ಸಾಧನೆ ಗೈದಿದೆ ಎಂದೇ ಶ್ಲಾಘಿಸಬಹುದು. ಈ ಪ್ರಕರಣದ ತನಿಖೆಯ ಹಾದಿಯೇ ತುಂಬಾ ಸ್ವಾರಸ್ಯಕರವಾಗಿದೆ.
ಎಸ್.... ಕೇಶ್ವಾಪೂರ ಠಾಣಾ ವ್ಯಾಪ್ತಿಯಲ್ಲಿ ಕಾರೊಂದು ಕಳ್ಳತನವಾಗುತ್ತದೆ. ಆದರೆ ಇದು ಸಾಮಾನ್ಯ ಕಾರುಕಳ್ಳತನ ಪ್ರಕರಣವಾಗಿರಲಿಲ್ಲ. ಅಸಲಿಗೆ ಆಗಿದ್ದು ಏನೆಂದರೆ ಪರಿಚಿತ ವ್ಯಕ್ತಿಯೊಬ್ಬ ಹಣವಿದ್ದವನ ಬಳಿ ಬಂದು ಕಾರು ಅಡವಿಟ್ಟುಕೊಳ್ಳುವಂತೆ ಕೋರುತ್ತಾನೆ. ಬದಲಿಗೆ ಕಾರು ಕೊಟ್ಟು ಹಣ ಪಡೆಯುತ್ತಾನೆ. ವಾರೊಪ್ಪತ್ತಿನೊಳಗಾಗಿ ಮನೆಮುಂದೆ ನಿಂತಿದ್ದ ಕಾರು ಕಳ್ಳತನವಾಗುತ್ತದೆ. ಕಾರು ಅಡವಿಟ್ಟುಕೊಂಡ ವ್ಯಕ್ತಿ ಗಾಬರಿಯಾಗುತ್ತಾನೆ. ತಕ್ಷಣ ಕಾರು ಪಡೆದಾತನಿಗೆ ಫೋನ್ ಕರೆ ಮಾಡುತ್ತಾನೆ. ಆತ ನನ್ನ ಅಡವಿಟ್ಟ ಕಾರು ಹುಡುಕಿಕೊಡಬೇಕು, ಇಲ್ಲ ಹಣ ನೀಡಬೇಕು ಎಂದು ಧಮಕಿ ಹಾಕುತ್ತಾನೆ. ಈ ಮಧ್ಯೆ ಕಾರು ಅಡವಿಟ್ಟುಕೊಂಡಾತ ಪೊಲೀಸ್ ಠಾಣೆಗೆ ಹೋಗುತ್ತಾನೆ. ಈ ಪ್ರಕರಣವನ್ನು ಕೇಶ್ವಾಪೂರ ಠಾಣೆಯ ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ, ಎಚ್‍ಸಿ ಎಚ್.ಎಂ. ಗುಳೇಶ ಪೊಲೀಸ್‍ಗಣ್ಣಿನಿಂದ ನೋಡುತ್ತಾರೆ. ತನಿಖೆಯ ವೇಳೆಯಲ್ಲಿ ಇದೊಂದು ಫ್ರೀಪ್ಲ್ಯಾನ್ ಕಳ್ಳತನ ಎನ್ನುವುದು ಗೊತ್ತಾಗುತ್ತದೆ. ಕಾರು ಅಡವಿಟ್ಟವನು ಹಾಗೂ ಕಾರು ಮಾರಿದವರನ್ನು ವಶಕ್ಕೆ ಪಡೆಯಲಾಗುತ್ತದೆ. ಹಾಗಂತ ಇದೊಂದೇ ಪ್ರಕರಣವಲ್ಲ ಇಂಥ ಸಾಲು ಸಾಲು ಅಪರಾಧವನ್ನು ಕಳ್ಳರು ಮಾಡಿರುವುದು ಗೊತ್ತಾಗುತ್ತದೆ. ಇದೊಂದು ವ್ಯವಸ್ಥಿತ ಜಾಲ ಎನ್ನುವುದು ಪೊಲೀಸರ ಅರಿವಿಗೆ ಬರುತ್ತದೆ.
ಈ ಕೃತ್ಯಗಳು ಹೇಗೆ ನಡೆಯುತ್ತವೆ?
ಪ್ರಕರಣ ಭೇದಿಸಿದ ಕೇಶ್ವಾಪೂರ ಪೊಲೀಸರೇ ಒಂದು ಕ್ಷಣ ದಂಗು ಬಡಿದಿದ್ದರು. ಏಕೆಂದರೆ ಕಳ್ಳರು ಖತರ್ನಾಕ್ ಪ್ಲ್ಯಾನ್ ಮಾಡುತ್ತಿದ್ದರು. ಎಲ್ಲೋ ಕದ್ದ ಕಾರನ್ನು ತೆಗೆದುಕೊಂಡು ಬಂದು ಅಡವಿಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಕಲಿ ಕಾಗದ ಸೃಷ್ಟಿಸಲಾಗುತ್ತದೆ. ಕಾರಿನ ಡುಪ್ಲಿಕೇಟ್ ಕೀ ಕೂಡ ಮಾಡಿಸಲಾಗುತ್ತದೆ. ಕಾರು ಅಡವಿಟ್ಟು ಹಣ ಪಡೆದ ಒಂದು ವಾರದೊಳಗೆ ನಕಲಿ ಕೀಲಿ ಬಳಸಿ ಅದೇ ಕಾರನ್ನು ಅವರೇ ಕಳ್ಳತನ ಮಾಡುತ್ತಾರೆ. ನಮ್ಮ ಕಾರು ವಾಪಸ್ ಕೊಡು ಇಲ್ಲ ಕಾರಿನ ಬೆಲೆಯ ಹಣ ಕೊಡು. ಇಲ್ಲದೇ ಹೋದಲ್ಲಿ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆಂದು ಅಡವಿಟ್ಟುಕೊಂಡವನನ್ನು ಇದೇ ತಂಡ ಬೆದರಿಸುತ್ತದೆ. ಪೊಲೀಸ್ ರಗಳೆ ಬೇಡ ಎಂದು ಅಡವಿಟ್ಟುಕೊಂಡಾತ ಮತ್ತೊಂದಿಷ್ಟು ಹಣ ಕೊಡುತ್ತಾನೆ. ಇಂಥ ಪ್ರಕರಣದಲ್ಲಿ ಕಾರಿಗೆ ಕಾರೂ ಬಂತು ಮತ್ತೊಂದಿಷ್ಟು ಹಣವೂ ಬಂತು ಎಂದು ಐನಾತಿ ತಂಡ ಖುಷಿ ಪಡುತ್ತದೆ. ಇದೇ ತರನಾಗಿ ಹತ್ತಾರು ಕಡೆಗಳಲ್ಲಿ ಮೋಸ ಮಾಡಿರಬಹುದು ಎನ್ನುವುದು ಕೇಶ್ವಾಪುರ ಪೊಲೀಸರಿಗೆ ಗೊತ್ತಾಗುತ್ತದೆ.
ಮಂಗಳೂರು ಲಿಂಕ್ ಭೇದಿಸಿದ ಪೊಲೀಸರು
ತಮ್ಮಲ್ಲಿ ದಾಖಲಾಗಿರುವುದು ಒಂದೇ ಪ್ರಕರಣ ಅದನ್ನು ಭೇದಿಸಿಯಾಗಿದೆ ಎಂದು ಪೊಲೀಸರು ಸುಮ್ಮನಾಗಿ ಬಿಡಬಹುದಿತ್ತು. ಆದರೆ ಕೇಶ್ವಾಪುರ ಪೊಲೀಸರು ಈ ಪ್ರಕರಣದ ಸಂಪೂರ್ಣ ಜಾಲ ಭೇದಿಸಲು ಮುಂದಾಗುತ್ತಾರೆ. ಆಗ ಅವರಿಗೆ ಸಿಕ್ಕಿದ್ದು ಮಂಗಳೂರು ಲಿಂಕ್. ಈ ಕೃತ್ಯದ ಹಿಂದೆ ಮಂಗಳೂರು ಮೂಲದವರಿದ್ದಾರೆ ಎಂದು ಗೊತ್ತಾಗುತ್ತದೆ. ಇವರು ಖತರನಾಕ್ ಆಸಾಮಿಗಳು. ಮಂಗಳೂರು ಮೂಲದ ವ್ಯಕ್ತಿಯನ್ನು ಬಂಧಿಸಿ ತರಲಾಗುತ್ತದೆ. ಆತ ಬಾಯಿ ಬಿಟ್ಟಾಗ ಈ ತಂಡ ಮಂಗಳೂರು, ಬೆಂಗಳೂರು ಭಾಗದಲ್ಲಿ ಈ ತರನಾದ ಸಾಕಷ್ಟು ಅಪರಾಧಿ ಕೃತ್ಯ ಮಾಡಿರುವುದು ಗೊತ್ತಾಗುತ್ತದೆ. ಇದೇ ಸುಳಿವಿನ ಮೇಲೆ ಮತ್ತೆ ಮಂಗಳೂರಿಗೆ ಕೇಶ್ವಾಪುರ ಪೊಲೀಸ್ ತಂಡ ಹೋಗುತ್ತದೆ. ಬಳಿಕ ಬೆಂಗಳೂರು, ಹೀಗೆ ಮೂರ್ನಾಲ್ಕು ಬಾರಿ ಸುತ್ತಾಡಿ ಪ್ರಕರಣದ ಪ್ರಮುಖ ಏಳು ಆರೋಪಿಗಳನ್ನು ಬಂಧಿಸಲಾಗುತ್ತದೆ. ಬಂಧಿತರಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ 12 ಐಶಾರಾಮಿ ಕಾರುಗಳು, ಒಂದು ಬೈಕ್, 2.27 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗುತ್ತದೆ. ಈ ಪ್ರಕರಣ ಭೇದಿಸಿದ್ದರಿಂದ ಅದೆಷ್ಟೋ ಜನ ಮೋಸ ಹೋದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕೇಶ್ವಾಪುರ ಪೊಲೀಸರ ಸಾಧನೆಗೆ ಹ್ಯಾಟ್ಸ್ ಅಫ್ ಹೇಳಲೆಬೇಕು.
ಇನ್ಸ್‍ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ಪಿಎಸ್‍ಐ ಬಾಬಾ, ಎಚ್‍ಸಿ ಗುಳೇಶ ಹುಡೇದ, ಪೇದೆಗಳಾದ ಮೃತ್ಯುಂಜಯ ಕಾಲವಾಡ, ವಿಠಲ ಮಾದರ, ಆನಂದ ಪೂಜಾರ, ಎಚ್.ಆರ್. ರಾಮಾಪುರ, ಎಚ್.ಎಸ್. ರಾಗಿ, ಸಿ.ಕೆ. ಲಮಾಣಿ ಅವುರುಳ್ಳ 7 ಮಂದಿಯ ತಂಡ ಏಳು ಜನರನ್ನು ಬಂಧಿಸಿ, 12 ಕಾರು, ಬೈಕ್ ವಶಕ್ಕೆ ಪಡೆದಿದೆ.
ಕೇಶ್ವಾಪೂರ ಠಾಣೆಯ ಪೊಲೀಸರಿಗೆ ಆಯುಕ್ತರಿಂದ ಶಹಬ್ಬಾಷಗಿರಿ -ನಗದು ಪುರಸ್ಕಾರ
ಕೇಶ್ವಾಪೂರ ಪೊಲೀಸರ ಇಂತಹ ಅಗಾಧ ಸಾಧನೆಯನ್ನು ಮನಸಾರೆ ಕೊಂಡಾಡಿರುವ ಪೊಲೀಸ್ ಆಯುಕ್ತ ಲಾಬೂರಾಮ್ ತಂಡಕ್ಕೆ ಇಲಾಖೆ ಪರಿಮಿಧಿಯ 25 ಸಾವಿರ ನಗದಿನೊಂದಿಗೆ ತಮ್ಮ ವೈಯಕ್ತಿಕ 5 ಸಾವಿರ ರೂ ಸೇರಿ ಒಟ್ಟು 30 ಸಾವಿರ ರೂ. ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.
Kshetra Samachara
01/02/2022 06:23 pm