ಧಾರವಾಡ: ಕೆರೆಯಲ್ಲಿ ಈಜಲೆಂದು ಹೋಗಿ ಈಜು ಬರದೇ ಮುಳುಗುತ್ತಿದ್ದ ಅಳಿಯನನ್ನು ರಕ್ಷಿಸಲು ಹೋಗಿ ಅಳಿಯನ ಸಮೇತ ಮಾವನೂ ದಾರುಣವಾಗಿ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಮುಗದ ಗ್ರಾಮದ ಕೆರೆಯಲ್ಲಿ ನಡೆದಿದೆ.
ಅಳಿಯ ಕರೆಪ್ಪ ಎಂಬಾತ ಕೆರೆಯಲ್ಲಿ ಈಜಲು ಹೋಗಿದ್ದ. ಈತನಿಗೆ ಈಜು ಬರದೇ ಮುಳುಗುತ್ತಿದುದನ್ನು ಕಂಡು ಆತನ ರಕ್ಷಣೆಗೆ ಮಾವ ವಿಠ್ಠಲ ಕುರುಬರ ಧಾವಿಸಿದ್ದಾನೆ. ಆದರೆ, ಇಬ್ಬರಿಗೂ ಈಜು ಬರದೇ ಮುಳುಗಿ ಸಾವನ್ನಪ್ಪಿದ್ದಾರೆ.
ಮುಗದ ಗ್ರಾಮದಲ್ಲಿ ಬೀರಲಿಂಗೇಶ್ವರ ಮೂರ್ತಿ ಸ್ಥಾಪನೆ ಕಾರ್ಯಕ್ರಮಕ್ಕೆ ಮಾವ ವಿಠ್ಠಲ ಅವರು ಮುಗದ ಗ್ರಾಮಕ್ಕೆ ಬಂದಿದ್ದರು. ಆದರೆ, ಅಳಿಯನನ್ನು ರಕ್ಷಿಸಲು ಹೋಗಿ ತಾನೂ ಸಾವನ್ನಪ್ಪಿರುವುದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.
ಅಳಿಯ ಹಾಗೂ ಮಾವನನ್ನು ಕಳೆದುಕೊಂಡ ಕುಟುಂಬಸ್ಥರ ರೋದನ ಮುಗಿಲುಮುಟ್ಟಿತ್ತು. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
28/01/2022 04:40 pm