ಹುಬ್ಬಳ್ಳಿ: ಆನ್‌ಲೈನ್ ಮೂಲಕ ಮಡಿಕೇರ್ ಎಕ್ಸಾಮಿನೇಶನ್ ಗ್ಲೌಸ್ ಸರಬರಾಜು ಮಾಡುವುದಾಗಿ ನಂಬಿಸಿದ ಅಪರಿಚಿತನೋರ್ವ ನಗರದ ಔಷಧ ವ್ಯಾಪಾರಿಯೊಬ್ಬರಿಂದ 1,90,400 ರೂ. ಪಡೆದು ವಂಚಿಸಿದ್ದಾನೆ.
ವಿದ್ಯಾನಗರದ ಎಸ್.ಕೆ. ಶಿರಗುಪ್ಪಿ ಎಂಬುವರು ಎಪಿಎಂಸಿ ಬಳಿಯ ಈಶ್ವರ ನಗರದಲ್ಲಿ ಮೆಡಿಕಲ್ ಡಿಸ್ಟ್ರಿಬ್ಯೂಟರ್ ಸರ್ಜಿಕಲ್ ಶಾಪ್ ವ್ಯವಹಾರ ಮಾಡುತ್ತಿದ್ದಾರೆ. ವ್ಯಾಪಾರದ ಸಲುವಾಗಿ ಜ.13ರಂದು ಇಂಡಿಯಾ ಮಾರ್ಟ್ ಆನ್‌ಲೈನ್ ಮಾರ್ಕೆಟ್‌ನಲ್ಲಿ ಗ್ಲೌಸ್ ಖರೀದಿಗಾಗಿ ಪರಿಶೀಲಿಸಿದ್ದರು. ಜ.14ರಂದು ಅಪರಿಚಿತನೊಬ್ಬ ಶಿರಗುಪ್ಪಿ ಅವರಿಗೆ ಕರೆ ಮಾಡಿದ್ದ. 'ನಾನು ಅಹಮದಾಬಾದ್‌ನ ರಿಲೀಫ್ ಮೆಡಿಕಲ್‌ನಿಂದ ಮಾತನಾಡುತ್ತಿದ್ದೇನೆ. ನೀವು ಇಂಡಿಯಾ ಮಾರ್ಟ್‌ನಲ್ಲಿ ಗ್ಲೌಸ್‌ಗಾಗಿ ಪರಿಶೀಲಿಸಿದ್ದೀರಿ. ನಮ್ಮಲ್ಲಿ ಗ್ಲೌಸ್ ಲಭ್ಯವಿದೆ' ಎಂದು ತಿಳಿಸಿದ್ದ.
ಬಳಿಕ ಎಷ್ಟು ಬಾಕ್ಸ್ ಗ್ಲೌಸ್ ಬೇಕು ಎಂದು ವ್ಯವಹಾರದ ಮಾತನಾಡಿದ್ದ. ಒಂದು ಬಾಕ್ಸ್‌ಗೆ 170 ರೂ. ಅದಕ್ಕೆ ಶೇ.12ರಷ್ಟು ತೆರಿಗೆ ಸೇರಿ 1 ಸಾವಿರ ಬಾಕ್ಸ್‌ಗೆ 1,90,400 ರೂ. ಪಾವತಿಸಬೇಕು ಎಂದಿದ್ದ. ಬಳಿಕ ಬ್ಯಾಂಕ್ ಆಫ್ ಇಂಡಿಯಾದ ಅಹಮದಾಬಾದ್ ಶಾಖೆಯ ಖಾತೆ ಸಂಖ್ಯೆ ಒಂದಕ್ಕೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾನೆ. ಗ್ಲೌಸ್ ಕೊಡದೇ ವಂಚಿಸಿದ್ದಾನೆ ಎಂದು ಶಿರಗುಪ್ಪಿ ಅವರು ಹು-ಧಾ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
20/01/2022 10:23 am