ಹುಬ್ಬಳ್ಳಿ: ಇಲ್ಲಿನ ದುರ್ಗದ ಬೈಲ್‌ನಲ್ಲಿ ಹೊಳೆಯುವ ಕಲ್ಲುಗಳನ್ನು ತಂದು ಇದರಲ್ಲಿ ಬಂಗಾರ ಇದೆ ಎಂದು ಸುಳ್ಳು ಹೇಳಿ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೂಡಲೇ ಪ್ರಕರಣವನ್ನು ತನಿಖೆ ಮಾಡಿ ಜಾಲವನ್ನು ಭೇದಿಸುವಂತೆ ಪೊಲೀಸ್ ಆಯುಕ್ತ ಲಾಭುರಾಮ್ ಆದೇಶಿಸಿದ್ದಾರೆ.
ಬಂಧಿತ ಆರೋಪಿತನಿಂದ 1.35 ಲಕ್ಷ ರೂ. ಮೌಲ್ಯದ 1039 ಗ್ರಾಂ ತೂಕದ 9 ಸ್ಟೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಪ್ಪಳದ ವಿದ್ಯಾನಗರ ನಿವಾಸಿ ಮೌನೇಶ ಶಿವಪ್ಪ ಅರ್ಕಾಚಾರಿ ಬಂಧಿತ ಆರೋಪಿ, ಇಲೆಕ್ಟಿಕ್ ಕೆಲಸ ಮಾಡಿಕೊಂಡಿರುವ ಮೌನೇಶ ದುರ್ಗದ ಬೈಲ್‌ಗೆ ಬಂದಿದ್ದ. ಹೊಳೆಯುವ ಸ್ಟೋನ್ ಗಳನ್ನು ತಂದು ಇದರಲ್ಲಿ ಬಂಗಾರ, ಬೆಳ್ಳಿ ಇದೆ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಇನ್‌ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.
ಆ ಕಲ್ಲನ್ನು ಆರೋಪಿ ‘ಕ್ಯಾಲಿಫೋರ್ನಿಯಂ’ ಎಂದು ಹೇಳುತ್ತಿದ್ದ. ಈ ವಿಚಾರ ತಿಳಿದ ಪೊಲೀಸರು ಆಯುಕ್ತರು ‘ಅದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ (ವಿಕಿರಣ ಸೂಸುವ ವಸ್ತು); ಅದನ್ನು ಬರಿಗೈಲಿ ಮುಟ್ಟಬೇಡಿ; ಮರಳಿನಲ್ಲಿ ಮುಚ್ಚಿ ಇಡಿ’ ಎಂದು ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದರು. ಆ ಕಲ್ಲನ್ನು ಮುಟ್ಟಿದ್ದ ಪೊಲೀಸರಲ್ಲಿ ಎದೆಯಲ್ಲಿ ಢವಢವ ಶುರಶುರುವಾಗಿತ್ತು. ಕ್ಯಾಲಿಫೋರ್ನಿಯಂ ಕುರಿತು ಗೂಗಲ್ನಲ್ಲಿ ಹುಡುಕಾಡಿ ಅದರ ಶಕ್ತಿ ಬಗ್ಗೆ ತಿಳಿದುಕೊಂಡ ಪೊಲೀಸರು ಮತ್ತಷ್ಟು ಬೆಚ್ಚಿ ಬಿದ್ದರು.
ಕೊಪ್ಪಳದ ಕ್ವಾರಿಯೊಂದರಲ್ಲಿ ಈ ಹೊಳೆಯುವ ಕಲ್ಲುಗಳು ಸಿಕ್ಕಿದ್ದವು ಎಂದು ಕೊನೆಗೂ ಮೌನೇಶ ಒಪ್ಪಿಕೊಂಡಿದ್ದಾನೆ. ಆದರೆ, ಇದಕ್ಕೆ ಕ್ಯಾಲಿಪೋರ್ನಿಯಂ ಎಂದು ಯಾಕೆ ಹೇಳಿದ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಶಹರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Kshetra Samachara
13/11/2021 07:02 pm