ಹುಬ್ಬಳ್ಳಿ: ರೈಲು ನಿಲ್ದಾಣ ಬಳಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಯುವಕ ರೈಲ್ವೇ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ಆತ ನೋಟುಗಳನ್ನು ತನ್ನ ಮನೆಯಲ್ಲಿಯೇ ಮುದ್ರಿಸುತ್ತಿದ್ದ ಎಂಬ ಸತ್ಯ ಬೆಳಕಿಗೆ ಬಂದಿದೆ.
ಕುಂದಗೋಳ ತಾಲೂಕು ಮಳಲಿ ಗ್ರಾಮದ ಹರೀಶ್ ಎಂ. ಭೋವಿ ಬಂಧಿತ ಆರೋಪಿ. ಹರೀಶ್ ತನ್ನ ಮನೆಯಲ್ಲಿಯೇ ಕಂಪ್ಯೂಟರ್ ಮತ್ತು ಮುದ್ರಣ ಯಂತ್ರ ಇಟ್ಟುಕೊಂಡು ನೋಟುಗಳನ್ನು ಮುದ್ರಿಸುತ್ತಿದ್ದ. ಇವನಿಗೆ ಹರಿಹರ ತಾಲೂಕು ಮಲೆಬೆನ್ನೂರಿನ ಇನ್ನೊಬ್ಬ ಸಾಥ್ ಕೊಡುತ್ತಿದ್ದ ಎನ್ನಲಾಗಿದೆ. ಬಂಧಿತನಿಂದ ಪೊಲೀಸರು ಭಾನುವಾರ 500 ರೂ. ಮುಖಬೆಲೆಯ ಒಟ್ಟು 210 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಸೋಮವಾರ ಆತನ ಮನೆ ಮೇಲೆ ದಾಳಿ ನಡೆಸಿ ನೋಟುಗಳನ್ನು ಮುದ್ರಿಸುತ್ತಿದ್ದ ಯಂತ್ರ ಹಾಗೂ 1.20 ಲಕ್ಷ ರೂ. ಮೌಲ್ಯದ ಒಟ್ಟು 213 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಬಂಧಿತನಿಂದ ಇದುವರೆಗೆ ಒಟ್ಟು 2.25 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳು ಹಾಗೂ ಯಂತ್ರ ವಶಪಡಿಸಿಕೊಂಡಿದ್ದಾರೆ. ಬಂಧಿತನು ಎಷ್ಟು ನೋಟುಗಳನ್ನು ಮುದ್ರಿಸಿದ್ದ? ಅವುಗಳನ್ನು ಎಲ್ಲೆಲ್ಲಿ ಚಲಾವಣೆ ಮಾಡಿದ್ದ? ಯಾವ್ಯಾವ ಪ್ರದೇಶದ ಜನರಿಗೆ ಅವುಗಳನ್ನು ಹಂಚಿಕೆ ಮಾಡಿದ್ದ? ನಕಲಿ ನೋಟು ದಂಧೆಯಲ್ಲಿ ಇನ್ನೂ ಎಷ್ಟು ಜನ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ರೈಲ್ವೆ ಠಾಣೆ ಪೊಲೀಸರು ಕಲೆ ಹಾಕುತ್ತಿದ್ದಾರೆ.
Kshetra Samachara
17/08/2021 08:37 pm