ಹುಬ್ಬಳ್ಳಿ: ಮೊಬೈಲ್ ಬಂದಿದ್ದೆ ಬಂದಿದ್ದು ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಅದರಂತೆ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಬಂದಿದ್ದು, ಜನರು ಹಣವನ್ನು ಸೇವ್ ಮಾಡಿದ್ದಕ್ಕಿಂತ ಕಳೆದುಕೊಂಡಿದ್ದೆ ಜಾಸ್ತಿ. ಮೂರು ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದಿದೆ ಕೋಟ್ಯಾಂತರ ರೂಪಾಯಿ ಆನ್ ಲೈನ್ ವಂಚನೆ. ಸೈಬರ್ ವಂಚನೆಯ ಕುರಿತು ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...
ಹೌದು. ಅವಳಿ ನಗರದಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಮೂರು ವರ್ಷಗಳಲ್ಲಿ ಸಾಮಾಜಿಕ ಜಾಲತಾಣ, ಒಟಿಪಿ ಹಾಗೂ ಆನ್‌ಲೈನ್ ಮೂಲಕ ವಂಚಿಸಿದ 440ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 10 ಕೋಟಿ ರೂ.ಗೂ ಹೆಚ್ಚು ಹಣದ ವಂಚನೆ 2022ರ ಮಾರ್ಚ್ ಅವಧಿಯ ವರೆಗೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಒಟ್ಟು 40 ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗಿದ್ದು, ಒಬ್ಬರಿಗೆ ಮಾತ್ರ ಶಿಕ್ಷೆಯಾಗಿದ್ದು, 78.11 ಲಕ್ಷ ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ. ಮಾರ್ಚ್ ತಿಂಗಳಲ್ಲಿ ಉದ್ಯಮಿಯೊಬ್ಬರಿಗೆ 3.5 ಕೋಟಿ ವಂಚನೆ ಮಾಡಿದ್ದು, ಸೈಬರ್ ಪ್ರಕರಣಕ್ಕೆ ಕಡಿವಾಣ ಇಲ್ಲವಾಗಿದೆ. ಆದರೆ ಪೊಲೀಸ್ ಆಯುಕ್ತರು ಮಾತ್ರ ಕಡಿವಾಣ ಹಾಕುತ್ತೇವೆ ಎನ್ನುತ್ತಾರೆ.
ಇನ್ನೂ ಗೃಹ ಬಳಕೆ ವಸ್ತುಗಳ ಖರೀದಿ, ವಾಹನಗಳ ಮಾರಾಟ, ಬಾಡಿಗೆ ಮನೆ ಹುಡುಕಾಟ ಮುಂತಾದ ಮಾಹಿತಿ ಪಡೆಯಲು ಕೆಲವರು ಗೂಗಲ್ ಮೊರೆ ಹೋಗುತ್ತಿದ್ದಾರೆ. ಅಂತಹ ಸಾಕಷ್ಟು ಜನರು ಆನ್‌ಲೈನ್ ವಂಚಕರ ಬಲೆಗೆ ಬಿದ್ದಿದ್ದಾರೆ. ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಎಷ್ಟು ಸಾರಿ ಜಾಗೃತಿ ಮೂಡಿಸಿದರೂ ಕೂಡ ಯಾರು ಕೂಡ ಕ್ಯಾರೆ ಎನ್ನದೇ ವಂಚನೆ ಜಾಲದಲ್ಲಿ ಬೀಳುತ್ತಿದ್ದಾರೆ. ಎಟಿಎಂ ಕಾರ್ಡ್‌ಗೆ ಕೆವೈಸಿ ಲಿಂಕ್ ಮಾಡಬೇಕು ಹಾಗೂ ಗ್ರಾಹಕರ ಸೇವಾ ಕೇಂದ್ರದಿಂದ ಎಂದು ಕರೆ ಮಾಡಿ, ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡು ವಂಚಿಸಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಕಾರು, ದ್ವಿಚಕ್ರ ವಾಹನ, ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳು ಮಾರಾಟಕ್ಕಿವೆ ಎಂಬುದನ್ನು ನಂಬಿಸಿ, ಅವರಿಂದ ಒಟಿಪಿ ಪಡೆದು ಅವರ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಲಾಗುತ್ತಿದೆ.
ಒಟ್ಟಿನಲ್ಲಿ ಜನರಿಗೆ ಮಾತ್ರ ಕೆಟ್ಟ ಮೇಲೆಯೇ ಬುದ್ಧಿ ಬರುತ್ತದೆ ಎಂಬುವಂತೆ ಪ್ರತಿ ತಿಂಗಳಿಗೊಮ್ಮೆ ಮೈಕ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜನರು ಮಾತ್ರ ಅಪರಿಚಿತ ವ್ಯಕ್ತಿಗಳ ಬಣ್ಣದ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.
Kshetra Samachara
11/04/2022 09:54 pm