ಧಾರವಾಡ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಧಾರವಾಡದ 2ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ, ದಂಡ ವಿಧಿಸಿ ಆದೇಶ ಹೊರಡಿಸಿದೆ.
ಧಾರವಾಡ ಕಮಲಾಪುರದ ನಿವಾಸಿ ಸಂಗಮೇಶ ಊರ್ಫ್ ದತ್ತು ಕಮಾಟಿ ಎಂಬಾತ ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ತನ್ನ ಆಟೊದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು 2018 ರ ಡಿ. 13 ರಂದು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಮಾಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಅದರಂತೆ ವಿಚಾರಣೆ ಮಾಡಿದ ಧಾರವಾಡದ 2 ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಸಿ. ಸದಾನಂದಸ್ವಾಮಿ ಅವರು, ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿ ಆರೋಪಿ ಸಂಗಮೇಶ ಕಾಮಾಟಿ ಎಸಗಿದ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು, ಅಪರಾಧಿ ಸಂಗಮೇಶಗೆ 10 ವರ್ಷ ಕಠಿಣ ಶಿಕ್ಷೆ, 42,500 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದರು.
ದಂಡದ ಮೊತ್ತವನ್ನು ಸಂತ್ರಸ್ತರಿಗೆ ಪರಿಹಾರವಾಗಿ ನೀಡಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ಸರೋಜಾ ಹೊಸಮನಿ ಅವರು ವಾದ ಮಂಡಿಸಿದರು.
Kshetra Samachara
28/01/2022 03:57 pm