ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚೆಟ್ಟಿ ವಿರುದ್ದ ಮಹಿಳೆಯೊಬ್ಬರ ಮೇಲೆ ಮಾನಭಂಗ, ಕೊಲೆಗೆ ಪ್ರಯತ್ನಿಸಿದ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು ಅ.22ಕ್ಕೆ ಆದೇಶ ಹೊರ ಬೀಳಲಿದೆ. ಧಾರವಾಡದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಾದ ಪ್ರತಿವಾದಗಳು ನಿನ್ನೆ ಮುಕ್ತಾಯಗೊಂಡಿದ್ದು ಆದೇಶವನ್ನು 22ರಂದು ಪ್ರಕಟಿಸುವುದಾಗಿ ಹೇಳಿದೆ.
2014ರಲ್ಲಿ ಧಾರವಾಡ ಉಪನಗರ ಠಾಣೆಯಲ್ಲಿ ಬಸವರಾಜ ಗಿರೆಣ್ಣವರ, ಮಂಜುನಾಥ ಗಿರೆಣ್ಣವರ, ಅಭಿನೇತ್ರಿ ಮಹಾದೇವ ಚೆಟ್ಟಿ, ಮಹಾದೇವ ಚೆಟ್ಟಿ ಸೇರಿದಂತೆ 10 ಜನರ ವಿರುದ್ಧ ಎಫ್‌ಐಆರ್ (ನಂ. 0159/2014) ದಾಖಲಾಗಿತ್ತು. ನಟಾಲಿಯಾ ಅಲಿಯಾಸ್ ನೇತ್ರಾ ಬಸವರಾಜ ಗಿರೆಣ್ಣವರ ದೂರು ದಾಖಲಿಸಿದ್ದರಲ್ಲದೇ ತಮ್ಮ ಪತಿ, ಮೈದುನರು ಹಾಗೂ ಹಾಲಿ ಕೃಷಿ ವಿ.ವಿ.ಕುಲಪತಿ ಮಹಾದೇವ ಚೆಟ್ಟಿ ಮುಂತಾದವರ ಕುಮ್ಮಕ್ಕಿನಿಂದ ನಿರಂತರ ದೈಹಿಕ ಹಲ್ಲೆ, ಮಾನಸಿಕ ಹಿಂಸೆ, ವರದಕ್ಷಿಣೆ ನೀಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದಾಡಿ ರಿವಾಲ್ವರ್ ತೋರಿಸಿ ಕೊಲೆಗೆ ಪ್ರಯತ್ನಿಸಿರುವುದಾಗಿ ದೂರಿದ್ದರು.
ಮಹಾದೇವ ಚೆಟ್ಟಿಯ ಪತ್ನಿ ಅಭಿನೇತ್ರಿ ಚೆಟ್ಟಿ ಮಧ್ಯಸ್ಥಿಕೆಯಲ್ಲಿ ತಮ್ಮ ವಿವಾಹ 19-06-2011ರಂದು ಬಸವರಾಜ ಗಿರೆಣ್ಣವರ ಆಗಿದ್ದು ತದನಂತರ ತನ್ನ ಪತಿ ಇತರರ ಕುಮ್ಮಕ್ಕಿನಿಂದ ಕೊಲೆಗೆ ಯತ್ನಿಸಿದ್ದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಚಾಲೂ ಮಾಡಿ ಕೊಲೆಗೆ ಸಹ ಯತ್ನಿಸಿದ್ದಾಗಿ ಆರೋಪಿಸಿದ್ದರು.
ಕೆಳ ಹಂತದ ನ್ಯಾಯಾಲಯದಲ್ಲಿ ಪ್ರಕರಣ ಮುಚ್ಚಿ ಹಾಕುವ ಯತ್ನ ಆರೋಪಿಗಳು ನಡೆಸಿದ್ದರೂ ನಟಾಲಿಯಾ ಅವರು ನಾಲ್ಕನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರಿಂದ ಪ್ರಕರಣಕ್ಕೆ ಮತ್ತೆ ಮರುಜೀವ ಬಂದು ವಿಚಾರಣೆಗೆ ಬಂದಿತ್ತು. ಅಲ್ಲದೇ ಪ್ರಕರಣದಲ್ಲಿ ಕುಲಪತಿಯವರಿಗೆ ಸಮನ್ಸ್ ಸಹ ಜಾರಿಯಾಗಿತ್ತು.
ಕೆಲ ತಿಂಗಳುಗಳ ಹಿಂದೆ ಕಾರವಾರ ರಸ್ತೆಯಲ್ಲಿ ಮಹಿಳಾ ಉದ್ಯೋಗಿಗಳಿಬ್ಬರು ಮೃತ ಪಟ್ಟ ಘಟನೆಯಲ್ಲೂ ಕೃಷಿ ವಿ.ವಿ.ಕುಲಪತಿ ಹೆಸರು ತಳುಕು ಹಾಕಿಕೊಂಡು ಅನೇಕ ಸಂಘಟನೆಗಳು ಕುಲಪತಿ ಹಠಾವೋ ವಿ.ವಿ.ಬಚಾವೋ ಎಂಬ ಆಂದೋಲನಕ್ಕೆ ಮುಂದಾಗಿದ್ದವು.
Kshetra Samachara
12/10/2021 01:44 pm