ಹುಬ್ಬಳ್ಳಿ: ಅದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಾಂಬ್ ಸ್ಪೋಟ್ ಪ್ರಕರಣ. ಎರಡೂ ವರ್ಷಗಳಾದರೂ ಕೂಡ ಒಂದೇ ಒಂದು ಸಾಕ್ಷಿ,ಪುರಾವೆಗಳು ಸಿಕ್ಕಿಲ್ಲ. ಹಾಗಿದ್ದರೇ ಚಾಲಾಕಿಗಳು ಕೇಂದ್ರ ಸರ್ಕಾರದ ಕಣ್ಣಿಗೆ ಮಣ್ಣು ಎರೆಚಿದ್ದಾರೆ. ಏನಿದು ಸ್ಟೋರಿ...? ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ರೈಲು ನಿಲ್ದಾಣದ ನಾಡ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷ ಸಮೀಪಿಸಿದರೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ತಾತ್ಕಾಲಿಕವಾಗಿ ಖುಲಾಸೆ ಮಾಡಲು ರೈಲ್ವೆ ಪೊಲೀಸರು ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಹುಬ್ಬಳ್ಳಿಯ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ‘ಸಿ ರಿಪೋರ್ಟ್’ ಸಲ್ಲಿಸಿದ್ದಾರೆ. 2019ರ ಅಕ್ಟೋಬರ್ 21ರಂದು ಹುಬ್ಬಳ್ಳಿ- ವಿಜಯವಾಡ ನಡುವೆ ಸಂಚರಿಸುವ ಅಮರಾವತಿ ಎಕ್ಸ್‌ಪ್ರೆಸ್ ರೈಲಿನ ಕೊನೆಯ ಬೋಗಿಯಲ್ಲಿ 8 ನಾಡ ಬಾಂಬ್‌ಗಳಿದ್ದ ಬಕೆಟ್ ಪತ್ತೆಯಾಗಿತ್ತು. ಇದರಲಿದ್ದ ಒಂದು ಬಾಂಬ್ ಸ್ಪೋಟಗೊಂಡ ಪರಿಣಾಮ ಚಹಾ ಮಾರುವ ಕಾರ್ಮಿಕ ಹುಸೇನಸಾಬ ನಾಯಕವಾಲೆ ಎಂಬಾತನ ಬಲಗೈ ಛಿದ್ರಗೊಂಡಿತ್ತು. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಫೋಟಗೊಂಡ ಸ್ಥಳಕ್ಕೆ ಅಂದಿನ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಮತ್ತಿತರರು ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದರು. ಯಾವುದೇ ಸಾಕ್ಷಿ, ಪುರಾವೆ, ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ರೇಲ್ವೆ ಪೊಲೀಸರು 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದಾರೆ.
ಇನ್ನೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಅಂಶ ಅಂದರೆ, ವಿಜಯವಾಡದಿಂದ ಹುಬ್ಬಳ್ಳಿಗೆ ಬಂದಿದ್ದ ಅಮರಾವತಿ ಎಕ್ಸ್‌ಪ್ರೆಸ್ ರೈಲು ನಾಲ್ಕನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು. ಎಲ್ಲ ಪ್ರಯಾಣಿಕರು ಇಳಿದ ಬಳಿಕ ಸ್ವಚ್ಛತಾ ಕಾರ್ಮಿಕನೊಬ್ಬನಿಗೆ 8 ಲಿಂಬೆಹಣ್ಣಿನ ಗಾತ್ರದ ಕಚ್ಚಾ ಬಾಂಬ್‌ಗಳಿದ್ದ ಬಕೆಟ್ ಸಿಕ್ಕಿತ್ತು. ಅದರ ಮೇಲೆ ‘ಪ್ರಕಾಶ ಅಭಿತ್ಕರ್, ಕೊಲ್ಲಾಪುರ ಎಂಎಲ್‌ಎ, ಗುರಗೋಟಿ, ‘ನೋ ಬಿಜೆಪಿ ನೋ ಆರ್‌ಎಸ್‌ಎಸ್. ಓನ್ಲಿ ಶಿವಸೇನಾ’ ಎಂದು ಬರೆಯಲಾಗಿತ್ತು. ಸಂಶಯಾಸ್ಪದ ಬಕೆಟ್ ಕಂಡ ಕೂಡಲೇ ಕಾರ್ಮಿಕ ಸ್ಥಳದಲ್ಲಿದ್ದ ಆರ್‌ಪಿಎಫ್ ಪೇದೆ ರವಿ ರಾಠೋಡಗೆ ಮಾಹಿತಿ ನೀಡಿದ್ದರು. ಆ ಬಕೆಟ್ ತೆಗೆದುಕೊಂಡು ಬಂದ ರವಿ ಸ್ಟೇಶನ್ ಮಾಸ್ಟರ್‌ಗೆ ವಿಷಯ ತಿಳಿಸಿದ್ದರು. ಬಳಿಕ ಕುತೂಹಲ ತಡೆಯಲಾರದೇ ಚಹಾ ಮಾರುವ ಹುಸೇನಸಾಬನನ್ನು ಕರೆದು, ಅದನ್ನು ಒಡೆದು ಪರೀಕ್ಷಿಸುವಂತೆ ಸೂಚಿಸಿದ್ದ. ಆತ ಕೈಯಲ್ಲಿ ಹಿಡಿದು ನೆಲಕ್ಕೆ ಒಡೆದ ಕೂಡಲೇ ಬಾಂಬ್ ಸ್ಪೋಟಗೊಂಡು ಆತನ ಕೈ ಛಿದ್ರಗೊಂಡಿತ್ತು.
ಒಟ್ಟಾರೆ ಐದು ದಿನಗಳ ಬಳಿಕ ಬೆಂಗಳೂರಿನಿಂದ ಬಂದ ಬಾಂಬ್ ನಿಷ್ಕ್ರಿಯ ದಳ ನಿರ್ಜನ ಪ್ರದೇಶದಲ್ಲಿ ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸಿತ್ತು. ಆದರೆ ಪ್ರಕರಣ ನಡೆದು ಎರಡು ವರ್ಷಗಳಾದರೂ ಕೂಡ ಇನ್ನೂ ಆರೋಪಿಗಳು ಪತ್ತೆಯಾಗದೇ ಇರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Kshetra Samachara
13/08/2021 07:03 pm