ಧಾರವಾಡ: ಧಾರವಾಡ ತಾಲೂಕಿನ ಹಾರೋಬೆಳವಡಿ ಹಾಗೂ ಶಿವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಮೂಲದ ಲಕ್ಷ್ಮಣ ಬಳ್ಳಾರಿ ಹಾಗೂ ಸಿದ್ದಾರೂಢ ಊರ್ಫ ಸಿದ್ದು ಉಪ್ಪಾರ ಎಂಬುವವರೇ ಬಂಧಿತ ಆರೋಪಿಗಳು. ಇವರು ಆಗಸ್ಟ್ 6 ರಂದು ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿ ಫಕ್ಕೀರಗೌಡ ಕಲ್ಲನಗೌಡರ ಅವರನ್ನು ಅಡ್ಡಗಟ್ಟಿ ಅವರ ಕೊರಳಲ್ಲಿದ್ದ 76 ಸಾವಿರ ರೂಪಾಯಿ ಮೌಲ್ಯದ ಎರಡೂವರೆ ತೊಲೆ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದರು. ಇವರನ್ನು ಇಂದು ಉಣಕಲ್ ಬಳಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಇವರೇ ಕೃತ್ಯ ಎಸಗಿದವರು ಎಂದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗಿ ಶಿವಳ್ಳಿ ಗ್ರಾಮದಲ್ಲೂ 1 ಲಕ್ಷ ಮೌಲ್ಯದ 26 ಗ್ರಾಂ ತೂಕದ ಚಿನ್ನದ ಸರ ಇದ್ದ ಬ್ಯಾಗ್‌ನ್ನು ಕದ್ದುಕೊಂಡು ಹೋಗಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ತಿಳಿಸಿದರು.
ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಧರ ಸುತಾರೆ, ಪಿಎಸ್ಐ ಮಹೇಂದ್ರ ನಾಯಕ ನೇತೃತ್ವದ ತಂಡ ಆರೋಪಿತರನ್ನು ಪತ್ತೆ ಮಾಡಿದೆ. ಸದ್ಯ ಬಂಧಿತರಿಂದ ಒಟ್ಟು 1.76 ಲಕ್ಷ ಮೌಲ್ಯದ 51 ಗ್ರಾಂ ಚಿನ್ನದ ಸಾಮಾನು ಹಾಗೂ 80 ಸಾವಿರ ರೂಪಾಯಿ ಮೌಲ್ಯದ ಒಂದು ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
Kshetra Samachara
11/08/2021 07:37 pm