ಧಾರವಾಡ: ಕಾಲೇಜಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಧಾರವಾಡ ವಿಶ್ವೇಶ್ವರಯ್ಯ ವಿಜ್ಞಾನ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಪ್ರೇರೇಪಿಸಿದ ಕಾಲೇಜು ಪ್ರಾಚಾರ್ಯ ಮಹಾದೇವ ಕುರುವತ್ತಿಗೌಡರ ಅವರ ಮೇಲೆ ದೂರು ದಾಖಲಾಗಿದ್ದು, ಈಗಾಗಲೇ ಪ್ರಾಚಾರ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಕಾಲೇಜಿನಲ್ಲಿ ಪಾಠ ಮಾಡುವ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಹೀಗಾಗಿ ದಿಕ್ಕು ತೋಚದ ವಿದ್ಯಾರ್ಥಿಗಳು ಧಾರವಾಡದ ಡಿಡಿಪಿಯು ಕಚೇರಿಗೆ ಬಂದು ತಮಗೆ ಏನಾದರೊಂದು ದಾರಿ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು ಭಯಭೀತರಾಗಿದ್ದಾರೆ. ಅಲ್ಲದೇ ಯಾವ ಶಿಕ್ಷಕರೂ ಕಾಲೇಜಿಗೆ ಬಂದು ಪಾಠ ಮಾಡದೇ ಇದ್ದದ್ದರಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತಾಗಿದೆ. ಹೀಗಾಗಿ ಪೋಷಕರ ಸಮೇತ ವಿದ್ಯಾರ್ಥಿಗಳು ಡಿಡಿಪಿಯು ಕಚೇರಿಗೆ ಬಂದು ಮನವಿ ಸಲ್ಲಿಸಿದ್ದಾರೆ.
ಇನ್ನು ತಲೆಮರೆಸಿಕೊಂಡಿರುವ ಕಾಲೇಜಿನ ಅಧ್ಯಕ್ಷ ಬಸವರಾಜನನ್ನು ಕೂಡಲೇ ಪತ್ತೆ ಮಾಡಬೇಕು ಹಾಗೂ ಇಬ್ಬರೂ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಒಟ್ಟಾರೆ ಕಾಲೇಜು ಅಧ್ಯಕ್ಷ ಹಾಗೂ ಪ್ರಾಚಾರ್ಯ ಮಾಡಿದ ಈ ನೀಚ ಕೃತ್ಯದಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಡಿಡಿಪಿಯು ಕೂಡ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ಮಾಡಿಕೊಡಲಾಗುವುದು ಎಂಬ ಭರವಸೆಯನ್ನು ಕೊಟ್ಟಿದ್ದಾರೆ. ಶಿಕ್ಷಣ ಇಲಾಖೆ ಇದನ್ನು ಹೇಗೆ ಬಗೆಹರಿಸುತ್ತದೆಯೋ ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/08/2022 09:55 pm