ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ಕವಿವಿ

ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದು. ಆದ್ರೆ, ಈ ವಿಶ್ವವಿದ್ಯಾಲಯ ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಲ್ಲಿರುತ್ತೆ.

ಈಗೇನಪ್ಪಾ ಆಯ್ತು ವಿಶ್ವವಿದ್ಯಾಲಯದಲ್ಲಿ ಅಂತೀರಾ? ಈ ಸ್ಟೋರಿ ನೋಡಿ.

ಈ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬೇಕಾದ್ದನ್ನು ಮಾಡಿದರೂ ದಕ್ಕಿಸಿಕೊಳ್ಳಬಹುದು ಅನ್ನೋ ರೀತಿಯಾಗಿದೆ. ಇಲ್ಲಿ ಫೇಲಾದವರಿಗೂ ಮುಂದಿನ ತರಗತಿಗಳಿಗೆ ಪ್ರವೇಶ ಸಿಗುತ್ತಿವೆ.

ಹೌದು! ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಜಿ.ಎಫ್.ಜಿ.ಸಿ. ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಅಶ್ವಿಥ್ ಗುನಗಾ ಅನ್ನೋ ವಿದ್ಯಾರ್ಥಿನಿ 2019 ರಲ್ಲಿ 6 ನೇ ಸೆಮಿಸ್ಟರ್ ನಲ್ಲಿ ಫೇಲಾಗಿದ್ದಾಳೆ. ಆಕೆ ಬ್ಯುಸಿನೆಸ್ ಲಾ ವಿಷಯದಲ್ಲಿ ನೂರು ಅಂಕಗಳಿಗೆ 20 ಅಂಕಗಳನ್ನಷ್ಟೇ ಪಡೆದಿದ್ದಾಳೆ. ಆದರೂ ಆಕೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಕಾಂ ಸ್ನಾತಕೋತ್ತರ ಪದವಿಗೆ ಪ್ರವೇಶ ಕೊಡಲಾಗಿದೆ. ಇದಕ್ಕೆ ಕಾರಣ ಈಕೆಯ ಅಂಕಪಟ್ಟಿಯೇ ಬದಲಾಗಿದ್ದು. ಯಾವಾಗ ಈಕೆ ಫೇಲಾಗುತ್ತಾಳೋ ಆಗ ಈಕೆ ಮೌಲ್ಯಮಾಪನ ವಿಭಾಗದ ಕೆಲವರನ್ನು ಭೇಟಿಯಾದ ನಂತರ ಆಕೆಯ ಹೊಸ ಅಂಕಪಟ್ಟಿಯೊಂದು ರೆಡಿಯಾಗಿದೆ. ಇದೇ ಅಂಕಪಟ್ಟಿ ಮೂಲಕ ಆಕೆಗೆ ಎಂಕಾಂಗೆ ಪ್ರವೇಶ ನೀಡಲಾಗಿದೆ.

ಹೊಸ ಅಂಕಪಟ್ಟಿಯಲ್ಲಿ 20 ಅಂಕಗಳ ಬದಲಿಗೆ 46 ಅಂಕಗಳು ಎಂದು ತಿದ್ದುಪಡಿ ಮಾಡಿ ಆಕೆಗೆ ಪ್ರವೇಶಾತಿ ನೀಡಲಾಗಿದೆ. ಇಂತಹ ದೊಡ್ಡ ಗೋಲ್ ಮಾಲ್ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಪ್ರಜ್ಞಾವಂತರು ತಲೆ ತಗ್ಗಿಸುವಂತಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೌಲ್ಯಮಾಪನ ಕುಲಸಚಿವ ರವೀಂದ್ರನಾಥ ಕದಂ, ಫೇಲಾದ ವಿದ್ಯಾರ್ಥಿನಿಗೆ ಪ್ರವೇಶ ನೀಡಿರುವ ವಿಷಯ ಗಮನಕ್ಕೆ ಬಂದಿದೆ. ನಾವು ವಿಚಾರಣೆ ಮಾಡುತ್ತಿದ್ದೇವೆ. ವಿದ್ಯಾರ್ಥಿನಿ‌ ಹೊರಗಡೆ ತಿದ್ದುಪಡಿ ಮಾಡಿಸಿಕೊಂಡು ಬಂದು ಎಂಕಾಂ ಪ್ರವೇಶ ಪಡೆದುಕೊಂಡಿದ್ದಾಳೆ. ಈ ಬಗ್ಗೆ ಠಾಣೆಗೆ ದೂರು ನೀಡೋದಾಗಿ ಹೇಳುತ್ತಾರೆ.

ಕೆಲ ವರ್ಷಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದ ಲೋಗೋ ಬಳಸಿ ನಕಲಿ ಅಂಕಪಟ್ಟಿಯನ್ನು ತಯಾರಿಸಿಕೊಡುತ್ತಿದ್ದ ಜಾಲದ ವಿರುದ್ಧ ಅಧಿಕಾರಿಗಳು ದೂರು ದಾಖಲಿಸಿದ್ದರು. ಆದರೆ ಆ ಪ್ರಕರಣ ಏನಾಯಿತು ಅನ್ನೋದು ಮಾತ್ರ ಇದುವರೆಗೂ ಯಾರಿಗೂ ಗೊತ್ತಿಲ್ಲ. ಇದೀಗ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅಂಕಪಟ್ಟಿಯೇ ತಿದ್ದುಪಡಿಯಾಗಿದೆ. ಅಧಿಕಾರಿಗಳು ಈ ಪ್ರಕರಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

24/12/2020 03:28 pm

Cinque Terre

85.38 K

Cinque Terre

8

ಸಂಬಂಧಿತ ಸುದ್ದಿ