ಧಾರವಾಡ: ಧಾರವಾಡದ ಕರ್ನಾಟಕ ನೀರಾವರಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ದೀಪಕ ಮೂಡಲಗಿ ಎಂಬ ಲೆಕ್ಕಾಧೀಕ್ಷಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೊಬ್ಬರಿ 2.89 ಕೋಟಿ ರೂಪಾಯಿ ನುಂಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
2020ರಲ್ಲಿ ದೀಪಕ್ ಮೂಡಲಗಿ ಎಂಬಾತ 6 ತಿಂಗಳು ಧಾರವಾಡದ ಕರ್ನಾಟಕ ನೀರಾವರಿ ನಿಗಮದಲ್ಲಿ ಲೆಕ್ಕಾಧೀಕ್ಷಕನಾಗಿ ಕೆಲಸ ಮಾಡಿದ್ದ. ಈ ವೇಳೆ ನಕಲಿ ದಾಖಲೆ ಸೃಷ್ಟಿಸಿ ಆರ್.ಬಿ.ಶೇಖ್ ಹಾಗೂ ವೈ.ಮುಲ್ಲಾ ಎಂಬುವವರ ಬ್ಯಾಂಕ್ ಅಕೌಂಟ್‌ಗೆ 2.89 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದ. ಅಥಣಿ ವಿಭಾಗದ ಹಿಪ್ಪರಗಿ ಬ್ಯಾರೇಜ್ ಕೆನಾಲ್ ವಿಭಾಗದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ದೀಪಕ್ ನಕಲಿ ದಾಖಲೆ ಸೃಷ್ಟಿಸಿದ್ದ. ನಕಲಿ ದಾಖಲೆಗಳನ್ನೇ ನಿಜವಾದ ಬಿಲ್‌ಗಳೆಂದು ಬಿಂಬಿಸಿ ಅಧಿಕಾರಿಗಳ ಸಹಿಯನ್ನೂ ಪಡೆದಿದ್ದ.
ಕಾಮಗಾರಿಯ ಒಟ್ಟು 2.89 ಕೋಟಿ ಹಣವನ್ನು ಆರ್.ಬಿ.ಶೇಖ್ ಹಾಗೂ ಎ.ವೈ.ಮುಲ್ಲಾ ಎನ್ನುವವರ ಬ್ಯಾಂಕ್ ಅಕೌಂಟ್‌ಗೆ ತಲಾ 1.44 ಹಾಗೂ 1.45 ಕೋಟಿ ವರ್ಗಾವಣೆ ಮಾಡಿದ್ದ. ಈ ಹಣ ವರ್ಗಾವಣೆ ಆದ ಕೂಡಲೇ ದೀಪಕ್ ಮೂಡಲಗಿ ಜಮಖಂಡಿಯ ಖಾಡಾಕ್ಕೆ ವರ್ಗಾವಣೆಗೊಂಡಿದ್ದಾರೆ. ಇದೀಗ ಈ ಅವ್ಯವಹಾರ ಬೆಳಕಿಗೆ ಬಂದಿದ್ದು, ನಿಗಮದ ಮುಖ್ಯ ಲೆಕ್ಕಾಧಿಕಾರಿ ವರದರಾಜ್ ಅವರು ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೀಪಕ್ ಎನ್ನುವವರು ಈ ರೀತಿ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ದಾರೆ. ಹಣ ವರ್ಗಾವಣೆಯಾದ ಕೂಡಲೇ ತಾನೂ ಕೂಡ ಬೇರೆ ಕಡೆ ವರ್ಗಾವಣೆಗೊಂಡಿದ್ದ ದೀಪಕ್‌ಗೆ ಇದೀಗ ದೊಡ್ಡ ಗಂಡಾಂತರ ಎದುರಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Kshetra Samachara
25/10/2021 03:40 pm