ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಐದು ಜನ ಜೈಲು ಹಕ್ಕಿಗಳಿಗೆ ಗುರುವಾರ ಬಿಡುಗಡೆ ಭಾಗ್ಯ ಬಂದಿದೆ.
ರಾಜ್ಯದಾದ್ಯಂತ ಇಂದು 96 ಜನ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಐವರು ಕೈದಿಗಳು ಬಿಡುಗಡೆಯಾಗಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಶಿವಮೊಗ್ಗದ ನಯಾಜ್ ಅಲಿಯಾಸ್ ನಯಾಜುಲ್ಲಾ ಮೌಲ್ಯಾಸಾಬ್, ಶಿವಮೊಗ್ಗದವನೇ ಆದ ಮುನ್ನಾ ಊರ್ಫ್ ಸೈಯದ್‌ಖಾದರ್ ಮೊಯಿದ್ದೀನ್, ಹುಬ್ಬಳ್ಳಿಯ ಪರಶ್ಯಾ ಊರ್ಫ್ ಪರಶುರಾಮ ನವಲಗುಂದ, ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಹನುಮಂತಪ್ಪ ದೊಡ್ಡಮನಿ ಹಾಗೂ ಕಲಘಟಗಿ ತಾಲೂಕಿನ ಹುಲಿಕಟ್ಟಿ ತಾಂಡಾದ ಸಕ್ರಪ್ಪ ಊರ್ಫ್ ಶಂಕ್ರಪ್ಪ ಲಮಾಣಿ ಎಂಬ ಕೈದಿಗಳು ಇದೀಗ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತಾ ಅವರು, ಬಿಡುಗಡೆಗೊಂಡ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಿ, ಸಮಾಜದಲ್ಲಿ ಇನ್ನುಮುಂದಾದರೂ ಒಳ್ಳೆಯ ಮಾರ್ಗದಲ್ಲಿ ಬದುಕುವಂತೆ ಸೂಚನೆ ನೀಡಿದರು.
ಸದ್ಯ ಬಿಡುಗಡೆಗೊಂಡ ಐದೂ ಜನ ಕೈದಿಗಳು ಜೈಲಿನಲ್ಲಿ ಸನ್ನಡತೆ ಹೊಂದಿದ್ದರು. ಹೀಗಾಗಿ ಇವರ ಹೆಸರನ್ನು ಬಿಡುಗಡೆಗಾಗಿ ಶಿಫಾರಸ್ಸು ಮಾಡಲಾಗಿತ್ತು. ರಾಜ್ಯಪಾಲರು ಇದಕ್ಕೆ ಒಪ್ಪಿಗೆ ಸೂಚಿಸಿ ಬಿಡುಗಡೆಗೆ ಅಂಕಿತ ಹಾಕಿದ್ದರು. ಹೀಗಾಗಿ ಐವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜೈಲು ಅಧೀಕ್ಷಕ ಎಂ.ಎ ಮರಿಗೌಡರ ಹೇಳಿದರು.
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಪರಶುರಾಮ ನವಲಗುಂದ ಎಂಬ ಕೈದಿಯ ಮಗಳು ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.82 ರಷ್ಟು ಫಲಿತಾಂಶ ಮಾಡಿದ್ದಾಳೆ. ತನ್ನ ಮಗಳ ವಿದ್ಯಾಭ್ಯಾಸಕ್ಕೆ ಜೈಲಿನಲ್ಲಿ ತಾನು ದುಡಿದ ದುಡ್ಡನ್ನೆ ಈತ ಕಳುಹಿಸಿಕೊಟ್ಟಿದ್ದ. ಬರುವ ದಿನಗಳಲ್ಲಿ ತನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತೇನೆ ಎಂದು ಬಿಡುಗಡೆಗೊಂಡ ಪರಶುರಾಮ ನವಲಗುಂದ ಹೇಳಿದ್ದಾನೆ.
ಒಟ್ಟಾರೆಯಾಗಿ ಸದ್ಯ ಸನ್ನಡತೆ ಆಧಾರದ ಮೇಲೆ ಐವರು ಕೈದಿಗಳು ಬಿಡುಗಡೆಗೊಂಡಿದ್ದು, ತಾವು ಮಾಡಿದ ತಪ್ಪನ್ನು ಅರಿತುಕೊಂಡಿರುವ ಇವರು ಬರುವ ದಿನಗಳಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುವ ಕನಸು ಹೊತ್ತಿದ್ದಾರೆ. ತಮ್ಮನ್ನು ಬಿಡುಗಡೆ ಮಾಡಿದ ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ..
ಬಿಡುಗಡೆ ನೀಡಿದ ಸನ್ನಡತೆ
Kshetra Samachara
26/05/2022 04:55 pm