ಹುಬ್ಬಳ್ಳಿ: ಅದು ಬರಗಾಲದಲ್ಲಿ ತುತ್ತು ಅನ್ನಕ್ಕಾಗಿಯೇ ಆರಂಭವಾದ ಮಹಿಳಾ ಉದ್ಯಮ. ಇಂದು ನೂರಾರು ಬಡವರಿಗೆ ಆಶ್ರಯ ತಾಣವಾಗಿದೆ. ಇಲ್ಲೊಬ್ಬ ಸಾಧಕಿ ಶಾವಿಗೆ ತಯಾರಕ ಘಟಕ ಸ್ಥಾಪಿಸಿ, ಹಲವು ಮಹಿಳೆಯರ ಬದುಕು ಕಟ್ಟಿದ್ದಾರೆ. ಕೇವಲ ಶಾವಿಗೆ ಅಷ್ಟೇ ಅಲ್ಲ, ರೊಟ್ಟಿ ತಯಾರಿಕೆ ಮೂಲಕ ಮಹಿಳೆಯರಿಗೆ ಆಸರೆಯಾಗಿದ್ದಾರೆ. ಈ ಆಸಕ್ತಿದಾಯಕ ಮಹಿಳಾ ಸಬಲೀಕರಣದ ಸ್ಟೋರಿ ನೋಡೋಣ ಬನ್ನಿ...
2010-11ರಲ್ಲಿ ತೀವ್ರ ಬರಗಾಲ. ಆಗ ಹೊಟ್ಟೆಗೆ ಹಿಟ್ಟು ಇಲ್ಲದ ಸ್ಥಿತಿ. ಕೈಯಲ್ಲಿ ಕೆಲಸವಿಲ್ಲ, ತಿನ್ನಲು ಅನ್ನವಿಲ್ಲ! ಈ ಸಮಯ ಮಹಿಳೆಯರಿಗೆ ಉದ್ಯೋಗ ನೀಡಲು ಯೋಚನೆ ಮಾಡಿದ್ದ ಅಣ್ಣಿಗೇರಿಯ ರಾಜೇಶ್ವರಿ ದೇಶಮುಖ್, ನಮ್ಮ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಬೇಕು, ಊಟಕ್ಕೆ ಆಧಾರವಾಗಬೇಕೆಂದು ನಿರ್ಧರಿಸಿ, ಸಿದ್ಧಪಡಿಸಿದ್ದು ಶಾವಿಗೆ! ಪ್ರಾರಂಭದಲ್ಲಿ 100ರಿಂದ 200 ಕೆಜಿ ಶಾವಿಗೆ ತಯಾರಿಸುತ್ತಿದ್ದ ಘಟಕ ಈಗ ಪ್ರತಿವರ್ಷ 1000 ರಿಂದ 1200 ಕ್ವಿಂಟಲ್ ಶಾವಿಗೆ ತಯಾರಿಸಿ, ಮಾರಾಟ ಮಾಡುತ್ತಿದೆ. ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ ಜಿಲ್ಲೆ ಸಹಿತ ಹಲವು ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದೆ.
ಇನ್ನು, ಶಾವಿಗೆ ಮಾರಾಟಕ್ಕೆ ಸ್ವಯಂ ನಿಯಮ ಅಳವಡಿಸಿದ್ದು, ಒಂದೊಂದು ಗ್ರಾಮದಲ್ಲಿ ಒಂದು ಬಡ ಕುಟುಂಬವನ್ನು ಆಯ್ಕೆ ಮಾಡಿ ಅವರ ಮೂಲಕ ಶಾವಿಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಗ್ರಾಮದಲ್ಲಿ ಒಬ್ಬರಿಗೆ ಮಾತ್ರ ಶಾವಿಗೆ ವಿತರಣೆ, ಅವರು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಬೇಕು. ಇವರ ಶಾವಿಗೆಗೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಡಿಮ್ಯಾಂಡ್ ಯಿದ್ದು, ಈ ಹಿಂದೆ ನಡೆದ 2 ಸಾಹಿತ್ಯ ಸಮ್ಮೇಳನಕ್ಕೆ ರೊಟ್ಟಿ ಸಿದ್ಧಪಡಿಸಿಕೊಟ್ಟಿದ್ದಾರೆ.
ಒಂದೊಂದು ಸಾಹಿತ್ಯ ಸಮ್ಮೇಳನಕ್ಕೆ 5 ಲಕ್ಷ ರೊಟ್ಟಿ ತಯಾರಿಸಿ, ಕೊಟ್ಟ ಹೆಗ್ಗಳಿಕೆ ಇವರದ್ದು! ಇವರ ರೊಟ್ಟಿ ಕರ್ನಾಟಕ ಆದ್ಯಂತ ಸರಬರಾಜು ಆಗುತ್ತಿದೆ. ಈ ವ್ಯಾಪಾರ ಲಾಭಕ್ಕಾಗಿ ಅಲ್ಲ, ಬದಲಾಗಿ ಮಹಿಳೆಯರಿಗೆ ಉದ್ಯೋಗ, ಜನರಿಗೆ ಶುದ್ಧ ಆಹಾರ ನೀಡಬೇಕೆಂಬುದಾಗಿದೆ.
ನೂರಾರು ಎಕರೆ ಜಮೀನನ್ನೂ ಹೊಂದಿರುವ ರಾಜೇಶ್ವರಿಯವರು, ತಾವೇ ಮುಂದೆ ನಿಂತು ಜಮೀನನ್ನು ಉಳುಮೆ ಮಾಡಿಸಿ ಸಾಧಕ ಕೃಷಿಕರಾಗಿಯೂ ಹೊರಹೊಮ್ಮಿದ್ದಾರೆ. ಅಲ್ಲದೆ, ನೂರಾರು ಬಡ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಜಾಗ ನೀಡಿದವರು ರಾಜೇಶ್ವರಿ. ಜತೆಗೆ ಅನೇಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ನೆರವೂ ನೀಡಿದ್ದಾರೆ.
Kshetra Samachara
02/07/2022 05:28 pm