ಹುಬ್ಬಳ್ಳಿ: ಗ್ರಾಮೀಣ ಭಾಗದ ಅಭಿವೃದ್ಧಿಗೆ ನಬಾರ್ಡ್ ಆದ್ಯತೆ ನೀಡುತ್ತಿದೆ. ಸ್ಟಾರ್ಟ್ ಅಪ್‌ಗಳಿಗೂ ಧನಸಹಾಯ ನೀಡಲಾಗುತ್ತಿದೆ ಎಂದು ನಬಾರ್ಡ್ ಅಧ್ಯಕ್ಷ ಡಾ.ಜಿ.ಆರ್.ಚಿಂತಲಾ ಹೇಳಿದರು.
ಇಲ್ಲಿನ ದೇಶಪಾಂಡೆ ಸ್ಟಾರ್ಟ್ ಅಪ್ ಕೇಂದ್ರದಲ್ಲಿ ಕಾರ್ಯಕ್ರಮದ ಬಳಿಕ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶಪಾಂಡೆ ಫೌಂಡೇಶನ್ ಉತ್ತಮ ಕೆಲಸ ಮಾಡುತ್ತಿದೆ. ನವಲಗುಂದ ಹಾಗೂ ನರಗುಂದದಲ್ಲಿ ರೈತರಿಗೆ ಕೃಷಿ ಹೊಂಡಗಳನ್ನು ನಿರ್ಮಿಸಿಕೊಟ್ಟಿದ್ದು, ಇದರಿಂದ ರೈತರ ಆದಾಯ ಹೆಚ್ಚಾಗಿದೆ ಎಂದರು.
ರೈತರ ಉತ್ಪನ್ನಗಳ ಮಾರಾಟಕ್ಕೆ ನಬಾರ್ಡ್ ಸಹಕಾರ ನೀಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಕೊಲ್ಲಾಪುರ ಚಪ್ಪಲಿ ಮಾರಾಟಕ್ಕೆ ನೆರವು ನೀಡಲಾಗಿದೆ. ಸಹಕಾರಿ ಬ್ಯಾಂಕ್‌ಗಳಿಗೆ ಸಾಲ ನೀಡಲಾಗುತ್ತಿದ್ದು, ಹಲವು ಸಂಸ್ಥೆಗಳೊಂದಿಗೆ ರೈತರ ಬೆಳೆ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು.
ನಬಾರ್ಡ್‌ನ ಸಿಜೆಎಂ ರಮೇಶ್ ಅವರು ಮಾತನಾಡಿ, ದೇಶಪಾಂಡೆ ಫೌಂಡೇಶನ್‌ನಿಂದ ನಿರ್ಮಾಣವಾಗಿರುವ ಕೃಷಿ ಹೊಂಡಗಳಿಂದ ರೈತರ ಆದಾಯ ಹೆಚ್ಚಾಗಿದೆ. ನವಲಗುಂದದ ಕಲ್ಮೇಶ್ವರ ರೈತ ಉತ್ಪಾದಕ ಸಂಸ್ಥೆಯು ವಾರ್ಷಿಕ 15 ಕೋಟಿ ಆದಾಯ ಗಳಿಸುತ್ತಿದೆ ಎಂದರು.
ಇನ್ನೂ ರಾಜ್ಯಕ್ಕೆ ಒಟ್ಟು 24 ಸಾವಿರ ಕೋಟಿ ಸಾಲ ನೀಡಲಾಗಿದ್ದು, ಇದರಲ್ಲಿ 15 ಸಾವಿರ ಕೋಟಿ ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳಿಗೆ ಬೆಳೆಸಾಲ ಮಾದರಿಯಲ್ಲಿ ನೀಡಲಾಗಿದೆ. ಕೃಷಿಗೆ ಸಂಬಂಧಿಸಿದಂತೆ ದೀರ್ಘಾವಧಿ ಸಾಲದ ರೂಪದಲ್ಲಿ ಒಟ್ಟು 8.67 ಸಾವಿರ ಕೋಟಿ ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ನೀಡಲು ಉದ್ದೇಶಿಸಲಾಗಿದ್ದು, ಈಗಾಗಲೇ ಅಭಿವೃದ್ಧಿ ಪಡಿಸಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಸುದ್ಧಿಗೋಷ್ಟಿಯಲ್ಲಿ ದೇಶಪಾಂಡೆ ಫೌಂಡೇಶನ್ ಸಹ ಸಂಸ್ಥಾಪಕ ಗುರುರಾಜ ದೇಶಪಾಂಡೆ, ಜಯಶ್ರೀ ದೇಶಪಾಂಡೆ, ಸಿಇಒ ವಿವೇಕ ಪವಾರ್ ಸೇರಿದಂತೆ ಇತರರಿದ್ದರು.
Kshetra Samachara
20/06/2022 07:48 pm