ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ ಬರಲಿದೆ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ

ಧಾರವಾಡ: ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದೇಶದಾದ್ಯಂತ ಎಲೆಕ್ಟ್ರಿಕ್‌ ವಾಹನ ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಧಾರವಾಡದಲ್ಲಿ ಈ ಮೊದಲೇ ನಿಗದಿಯಾಗಿದ್ದ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ ಸ್ಥಾಪನೆಗೆ ಮುಹೂರ್ತ ಕೂಡಿ ಬಂದಿದೆ.

ಬೆಂಗಳೂರು ಮೂಲದ ಶುಭಂ ಗೋಲ್ಡ್‌ ಮಾಲೀಕ ರಾಜೇಶ ಮೆಹ್ತಾ, 5 ಸಾವಿರ ಕೋಟಿ ಹೂಡಿಕೆ ಮಾಡಿ ಇಲ್ಲಿನ ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ ಶುರು ಮಾಡಲು ಅಂತಿಮ ಸಿದ್ಧತೆಯಲ್ಲಿದ್ದಾರೆ. ಈ ಘಟಕದ ನಿರ್ಮಾಣಕ್ಕೆ 150 ಎಕರೆ ಜಮೀನು ಗುರುತಿಸಲಾಗಿದ್ದು, 2022ರ ಆರಂಭದಲ್ಲಿ ಘಟಕ ನಿರ್ಮಾಣ ಕಾಮಗಾರಿ ಸಹ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

ಕಳೆದ ಎರಡು ವರ್ಷಗಳ ಹಿಂದೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದ ಜಗದೀಶ ಶೆಟ್ಟರ್‌ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕೈಗಾರಿಕಾ ಮೇಳದಲ್ಲಿ ಈ ಘಟಕ ಆರಂಭಿಸಲು ರಾಜೇಶ ಮೆಹ್ತಾ ಅವರು ರಾಜ್ಯ ಸರ್ಕಾರದ ಎದುರು ಪ್ರಸ್ತಾಪ ಮಾಡಿದ್ದರು. ಅಂತೆಯೇ ಇದೀಗ ಎಲ್ಲ ಸಿದ್ಧತೆಗಳೊಂದಿಗೆ ಘಟಕ ಸ್ಥಾಪನೆ ಸನ್ನಿಹಿತವಾಗಿದೆ. ಈ ಘಟಕದಲ್ಲಿ ಶೇ. 85ರಷ್ಟು ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಮಾಡಬೇಕು ಎಂಬ ಚಿಂತನೆಯೂ ಇದೆ. ಈ ಘಟಕ ಸ್ಥಾಪನೆಯಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ರಾಜ್ಯ ನಿರ್ದೇಶಕ ಶರಣು ಅಂಗಡಿ ಹೇಳಿದರು.

ಇದೀಗ ಈ ಕೈಗಾರಿಕೆ ಸ್ಥಾಪನೆಗೆ ರಾಯಾಪುರ ರೈತರು ಭೂಮಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಫಲವತ್ತಾದ ಭೂಮಿ ನೀಡಿ ರೈತರು ಕಂಪೆನಿ ಮಾಲೀಕರ ಮುಂದೆ ಮಂಡಿಯೂರುವಂತಾಗಿದೆ. ಈಗಾಗಲೇ ಅನೇಕ ಕೈಗಾರಿಕೆಗಳಿಗೆ ಭೂಮಿ ನೀಡಿದ್ದು, ರೈತರು ಅನೇಕ ಸಮಸ್ಯೆ ಎದುರಿಸಿದ್ದಾರೆ. ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ 150 ಎಕರೆ ಜಮೀನು ಇಲ್ಲ. ರೈತರ ಜಮೀನು ಇದೆ. ಆ ಜಮೀನು ನೀಡಲು ನಾವು ಆಸಕ್ತರಿಲ್ಲ ಎಂಬ ಮಾತು ಕೇಳಿ ಬಂದಿದೆ.

ಘಟಕ ಸ್ಥಾಪನೆ ಕುರಿತು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ತೈಲ ಬೆಲೆ ಏರಿಕೆಯಿಂದಾಗಿ ಪ್ರಸ್ತುತ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಅಗತ್ಯತೆ ನಮ್ಮ ಸಮಾಜಕ್ಕಿದೆ. ಈಗಾಗಲೇ ಈ ಬಗ್ಗೆ ದೇಶಾದ್ಯಂತ ಅಚ್ಚರಿಯ ಬೆಳವಣಿಗೆ ಆಗುತ್ತಿದೆ. ಈ ಕ್ಷೇತ್ರದಲ್ಲಿ ಬೃಹತ್‌ ಅವಕಾಶಗಳು ತೆರೆಯಲಿದ್ದು, ಅವುಗಳನ್ನು ನಾವು ಬಳಸಿಕೊಳ್ಳಬೇಕಿದೆ. ಬರೀ ಧಾರವಾಡದ ರಾಯಾಪುರ ಮಾತ್ರವಲ್ಲದೇ ಎಲೆಕ್ಟ್ರಿಕ್‌ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು ಬೆಂಗಳೂರಿನ ಬಿಡದಿ, ಕೋಲಾರ, ಹೊಸೂರಿನಲ್ಲೂ ಸ್ಥಾಪನೆಗೊಳ್ಳಲಿವೆ. ರಾಜ್ಯದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಮಾರಾಟದಲ್ಲಿ ಶೇ. 31ರಷ್ಟು ಪ್ರಗತಿ ಕಂಡು ಬಂದಿರುವುದು ಸಂತಸದ ಸಂಗತಿ. ಇದನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ರಾಯಾಪುರ ಘಟಕಕ್ಕೆ ಮೊದಲು ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

22/12/2021 09:06 pm

Cinque Terre

47.98 K

Cinque Terre

13

ಸಂಬಂಧಿತ ಸುದ್ದಿ