ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಎಂಬುವಂತ ಹಾಡು ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಬಿಟ್ಟೂ ಬಿಡದೇ ಸುರಿಯುವ ಮಳೆಯಿಂದ ಕಣ್ಣೀರಿನ ಕೋಡಿ ಮಾತ್ರ ಹರಿಯುತ್ತಿದೆ. ಸ್ವಂತ ಶ್ರಮವನ್ನೇ ನೆಚ್ಚಿ ಬದುಕುವ ವೃದ್ಧ ಜೀವಗಳಿಗೆ ಈ ಮಳೆಯು ನರಕಯಾತನೆ ಉಂಟು ಮಾಡಿದೆ. ಅಷ್ಟಕ್ಕೂ ಏನಿದು ಮಳೆ ಹನಿಯ ಕಣ್ಣೀರ ಕಹಾನಿ ಅಂತೀರಾ? ಈ ಸ್ಟೋರಿ ನೋಡಿ.
ನೀರಿನಲ್ಲಿ ನಿಂತಿರುವ ಮಡಕೆ ಕುಡಿಕೆಗಳು. ಈಗಲೋ ಆಗಲೋ ಕರಗಿ ನೀರಾಗುವ ಮಣ್ಣಿನ ಉಪಕರಣಗಳು. ಮಳೆ ನೀರಿಗಿಂತ ಕಣ್ಣೀರಿನ ಬಾಧೆಯನ್ನು ಅನುಭವಿಸುತ್ತಿರುವ ವೃದ್ಧ ಜೀವಗಳು. ಇಂತಹ ಮನಕಲಕುವ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಈದ್ಗಾ ಮೈದಾನದ ಆವರಣ. ಹೌದು..ಮೈಯಲ್ಲಿ ಶಕ್ತಿ ಇದ್ದರೂ ದುಡಿಯದೇ ಓಡಾಡುವ ಸೋಮಾರಿಗಳ ಮಧ್ಯದಲ್ಲಿ ಈ ಇಬ್ಬರೂ ವೃದ್ಧೆಯರು ತಮ್ಮ ಜೀವನದ ಬಂಡೆಗೆ ತಾವೇ ಸಾರಥಿಯಾಗಿದ್ದಾರೆ. ಆದರೆ ಇವರ ಕಷ್ಟ ಕಣ್ಣಿಲ್ಲದ ದೇವರಿಗೆ ಕಾಣುತ್ತಿಲ್ಲ. ಮಳೆರಾಯನಿಗಂತೂ ಕೇಳುತ್ತಲೇ ಇಲ್ಲ. ಸುರಿಯುವ ಮಳೆಯಲ್ಲಿಯೇ ಮಡಿಕೆ ಕುಡಿಕೆಗಳನ್ನು ಇಟ್ಟುಕೊಂಡ ವೃದ್ಧರು ಯಾವಾಗ ಹಾಳಾಗಿ ಹೋಗುತ್ತದೆಯೋ ಎಂಬ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಮಳೆಯ ನೀರಿನಿಂದ ಮಣ್ಣಿನ ಪಾತ್ರೆಗಳು ಹಾಳಾಗಿ ಹೋಗುತ್ತಿದ್ದು, ಕಣ್ಣೀರ ಕವಚದಿಂದಲೇ ಬಚ್ಚಿಟ್ಟುಕೊಳ್ಳುವುದಾದರೂ ಹೇಗೆ ಎಂಬುವುದು ವೃದ್ಧರ ಆತಂಕ.
ಇನ್ನೂ ಮಡಿಕೆ ಕುಡಿಕೆಗಳನ್ನು ಮಾರಾಟ ಮಾಡಿಯೇ ಜೀವನ ನಡೆಸಬೇಕು ಎಂದುಕೊಂಡ ವೃದ್ಧರ ಜೀವನಕ್ಕೆ ಬಿಡದೇ ಸುರಿಯುವ ಮಳೆ ಬಿರುಗಾಳಿ ತಂದೊಡ್ಡಿದೆ. ಕೈ ಕೆಸರು ಮಾಡಿಕೊಂಡು ಹೊತ್ತಿನ ಗಂಜಿ ಕುಡಿಯಬೇಕಿದ್ದವರು ಮಳೆಗೆ ಅಂಜಿ ಕಣ್ಣೀರು ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಅದೆಷ್ಟೋ ಅವಾಂತರ ಸೃಷ್ಟಿಸಿರುವ ಮಳೆರಾಯ ಈ ವೃದ್ಧ ಜೀವಗಳ ಕಷ್ಟ ಕಾಣುತ್ತಿಲ್ಲವೇ. ಕಣ್ಣು ಬಿಟ್ಟು ನೋಡು ಒಮ್ಮೆ ಕಂಬನಿ ಮಿಡಿಯುತ್ತಿವೆ ಕೈಯಲ್ಲಿ ಶಕ್ತಿ ಇಲ್ಲದ ಕಾಯಕ ಯೋಗಿಗಳು. ಇನ್ನಾದರೂ ಮಳೆ ತನ್ನ ನರ್ತನ ನಿಲ್ಲಿಸಿ ಜೀವಕ್ಕೆ ನೆಲೆ ನಿಲ್ಲುವ ಅವಕಾಶ ನೀಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/09/2022 08:52 pm