ಕುಂದಗೋಳ : ತಾಲೂಕಿನ ಎಲ್ಲೆಡೆ ಅತಿವೃಷ್ಟಿಗೆ ಮನೆ ಹಾನಿ, ಬೆಳೆ ಹಾನಿ ಸಂಭವಿಸಿದರೂ ಸೂಕ್ತ ಪರಿಹಾರ ನೀಡುವಲ್ಲಿ ಹಾಗೂ ಸ್ಥಳ ಮಹಜರು ಮಾಡುವಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ.
ಮನೆ ಬಿದ್ದ ಪಶುಪತಿಹಾಳ ಸೇರಿದಂತೆ ಇತರೆ ಗ್ರಾಮಸ್ಥರಿಗೆ ಇಂದಿಗೂ ಪರಿಹಾರ ಸಂದಾಯ ಮಾಡದೇ ಹಾಗೂ ತಮ್ಮ ಕರ್ತವ್ಯ ನಿಭಾಯಿಸದೆ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ, ಮುಖಂಡ ಮುತ್ತಣ್ಣ ಶಿವಳ್ಳಿ ದಿಢೀರ್ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.
ಪಶುಪತಿಹಾಳ ಗ್ರಾಮದಲ್ಲಿ ಮನೆ ಬಿದ್ದ ಐವತ್ತಕ್ಕೂ ಅಧಿಕ ಫಲಾನುಭವಿಗಳು ಈ ಹೋರಾಟಕ್ಕೆ ಸಾಥ್ ನೀಡಿದ್ದು, ಮನೆ ಬಿದ್ದರೂ ಪರಿಹಾರ ಇಲ್ಲವೇ!? ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಈ ವೇಳೆ ಸಂಶಿ ಗ್ರಾಮದಲ್ಲಿ ಅತಿವೃಷ್ಟಿಗೆ ಮನೆ ಕಳೆದುಕೊಂಡು ತಾಲೂಕು ಆಡಳಿತದ ಆದೇಶದಂತೆ ತಾತ್ಕಾಲಿಕವಾಗಿ ಸಂಶಿಯ ಎಪಿಎಂಸಿ ಮಳಿಗೆಯಲ್ಲಿ ವಾಸವಿದ್ದ ಮಹಿಳೆ, ಅಧಿಕಾರಿಗಳು ನಮಗೆ ಸೂರು ನೀಡದೆ ವಾಸವಿದ್ದ ಎಪಿಎಂಸಿ ಮಳಿಗೆ ಸಹ ಕಸಿದು ಹೊರದಬ್ಬಿದ್ದಾರೆ ಎಂದು ಕಣ್ಣೀರು ಹಾಕಿ ಸಮಸ್ಯೆ ವಿವರಿಸಿದರು.
ತಹಶೀಲ್ದಾರ್ ಕೊಠಡಿ ಬಾಗಿಲ ಮುಂದೆ ಗ್ರಾಮಸ್ಥರು ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಗಂಗಾಧರ ಪಾಣಿಗಟ್ಟಿ ನೇತೃತ್ವದಲ್ಲಿ ಧರಣಿ ಕೈಗೊಂಡಿದ್ದು ಸ್ಥಳಕ್ಕೆ ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಅಭಿಯಂತರರು ಬರಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ.
Kshetra Samachara
03/10/2022 02:14 pm