ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಲು ಹೊರಟ ಮೆಕ್ಯಾನಿಕಲ್ ಎಂಜಿನಿಯರ್

ಧಾರವಾಡ: ಅದೆಷ್ಟೋ ಜನ ಯುವಕರು ಕೃಷಿ ಲಾಭದಾಯಕವಲ್ಲ ಎಂದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಯುವ ಜನರನ್ನು ಕೃಷಿಯತ್ತ ಸೆಳೆಯಬೇಕು ಎಂಬ ಪ್ರಯತ್ನಗಳು ಈಗಾಗಲೇ ನಡೆಯುತ್ತಲೇ ಇವೆ. ಇಲ್ಲೊಬ್ಬ ಯುವಕ ತಾನು ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದರೂ ಸಿಕ್ಕ ಕೆಲಸ ಬಿಟ್ಟು ಇದೀಗ ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ. ಈಗಾಗಲೇ ಒಂದು ಹೆಜ್ಜೆ ಮುಂದೆ ಇಟ್ಟಿರುವ ಈ ಯುವಕ ಒಂದೇ ಸೂರಿನಡಿ ವಿವಿಧ ಕೃಷಿ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ಈ ದೃಶ್ಯಗಳಲ್ಲಿ ಕಾಣುತ್ತಿರುವ ಯುವಕನ ಹೆಸರು ವೀರೇಶ ಧಾರವಾಡ. ಮೂಲತಃ ಅಳ್ನಾವರ ತಾಲೂಕಿನ ಹೊನ್ನಾಪುರ ಗ್ರಾಮದವರು. ವಯಸ್ಸು ಈಗಷ್ಟೆ 29 ವರ್ಷ. ಆಗಲೇ ಕೃಷಿ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಈತ, ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವುದು ಬೇಡ. ಸ್ವಯಂ ಉದ್ಯಮಿಯಾಗಬೇಕು ಎಂದು ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ ನಂತರ ಇವರಿಗೆ ಕೆಲಸವೂ ಸಿಕ್ಕಿತ್ತು. ಅಷ್ಟೊತ್ತಿಗಾಗಲೇ ಕೊರೊನಾದಿಂದ ಆದ ಲಾಕ್‌ಡೌನ್‌ನಿಂದ ವಾಪಸ್ ಊರಿಗೆ ಬಂದ ವೀರೇಶ ತಮ್ಮದೇ ಮೂರು ಎಕರೆ ಜಮೀನಿನಲ್ಲಿ ಕೃಷಿ ಆರಂಭಿಸಿದರು.

ಹಂತ ಹಂತವಾಗಿ ಆಕಳು ಸಾಕಾಣಿಕೆ, ಕುರಿ ಸಾಕಾಣಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇಣು ಕೃಷಿ, ಮೀನು ಸಾಕಾಣಿಕೆಯ ಜೊತೆಗೆ ಮಾವು, ಅರಿಶಿನ, ಬಾಳೆ, ಭತ್ತ, ಪೇರಲ ಸೇರಿದಂತೆ ಇತ್ಯಾದಿ ಬೆಳೆಗಳನ್ನೂ ಬೆಳೆದು ಇದೀಗ ಒಂದೇ ಸೂರಿನಡಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಎರೆಹುಳು ಗೊಬ್ಬರವನ್ನೂ ಸಿದ್ಧಪಡಿಸುವ ಇವರು, ನೈಸರ್ಗಿಕವಾಗಿಯೇ ಬಾಳೆ ಬೆಳೆಯುತ್ತಾರೆ.

ವೀರೇಶ ಎಂಬ ಯುವಕ ಎಂಜಿನಿಯರಿಂಗ್ ಹುದ್ದೆ ಬಿಟ್ಟು ಇದೀಗ ಕೃಷಿಯತ್ತ ಮುಖ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಶ್ವಾನಗಳನ್ನೂ ಸಾಕಿ ಅದರ ಮರಿಗಳನ್ನು ಮಾರಾಟ ಮಾಡುವ ಮೂಲಕ ಅದರಲ್ಲೂ ಲಾಭವನ್ನು ವೀರೇಶ ಕಂಡುಕೊಂಡಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಇಷ್ಟೆಲ್ಲ ಕೃಷಿಯನ್ನು ಒಂದೇ ಸೂರಿನಡಿ ಮಾಡಿ ಕೃಷಿಯಲ್ಲಿ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ ಎಂದು ಹೊನ್ನಾಪುರದ ಸೋಮಶೇಖರ ಮೆಚ್ಚುಗೆ ವ್ಯಕ್ತಪಡಿಸಿದರು.

ಏನೇ ಆಗಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ವೀರೇಶ ತಮ್ಮ 29ನೇ ವಯಸ್ಸಿನಲ್ಲೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಗಮನಸೆಳೆಯುವ ಮೂಲಕ ಯುವಕರಿಗೆ ಮಾದರಿ ಎನಿಸಿದ್ದಾರೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/09/2022 01:47 pm

Cinque Terre

45.4 K

Cinque Terre

5

ಸಂಬಂಧಿತ ಸುದ್ದಿ