ಧಾರವಾಡ: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಕೃಷಿ ಜಾತ್ರೆ ನಡೆಸಲು ಸಿದ್ಧವಾಗಿದೆ. ಈ ಕೃಷಿ ವಿಶ್ವವಿದ್ಯಾಲಯವು ಆಯೋಜನೆ ಮಾಡುವ ಕೃಷಿ ಮೇಳಕ್ಕೆ ಕೃಷಿ ಜಾತ್ರೆ ಅಥವಾ ರೈತರ ಜಾತ್ರೆ ಎಂದೇ ಕರೆಯಲಾಗುತ್ತದೆ. ಪ್ರಸಕ್ತ ವರ್ಷದ ಕೃಷಿ ಮೇಳವನ್ನು ಇದೇ ಸೆ.17 ರಿಂದ 20 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಆರ್.ಬಸವರಾಜಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು ಎಂಬ ಶೀರ್ಷಿಕೆಯಡಿ ಈ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದರು.
ಬೆಳಗಾವಿ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರಕನ್ನಡ ಹಾಗೂ ಧಾರವಾಡ ಜಿಲ್ಲೆಯ 14 ಜನ ರೈತರು ಹಾಗೂ ರೈತ ಮಹಿಳೆಯರಿಗೆ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೃಷಿ ವಸ್ತು ಪ್ರದರ್ಶನದಲ್ಲಿ 184 ಹೈಟೆಕ್ ಮಳಿಗೆಗಳು, 364 ಸಾಮಾನ್ಯ ಮಳಿಗೆಗಳು, 21 ಯಂತ್ರೋಪಕರಣಗಳ ಮಳಿಗೆಗಳು, 27 ಆಹಾರ ಮಳಿಗೆಗಳು, 54 ಜಾನುವಾರು ಪ್ರದರ್ಶನ ಮಳಿಗೆಗಳು, 9 ಕ್ಷೇತ್ರ ಮಳಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಸಕ್ತ ವರ್ಷದ ಕೃಷಿ ಮೇಳದಲ್ಲಿ 10 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಸೆ.17 ರಂದು ಫಲಪುಷ್ಪ, ಗೆಡ್ಡೆ ಗೆಣಸು, ವಿಸ್ಮಯಕಾರಿ ಕೀಟ ಪ್ರಪಂಚ ಹಾಗೂ ಬೀಜ ಮೇಳ ನಡೆಯಲಿದೆ. ಸೆ.18 ರಂದು ಬೆಳಿಗ್ಗೆ 11-30ಕ್ಕೆ ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಚಾಲನೆ ನೀಡುವರು. ಸೆ.19 ಹಾಗೂ 20 ರಂದು ವಿವಿಧ ವಿಚಾರಗೋಷ್ಠಿಗಳು ನಡೆಯಲಿವೆ ಎಂದರು.
Kshetra Samachara
14/09/2022 05:12 pm