ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಕಳೆದ ವರ್ಷ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಬೆಲೆ ಗಗನಕ್ಕೇರಿದ್ದರಿಂದ ಹಲವರು ಹಲವಾರು ರೀತಿಯಲ್ಲಿ ಈರುಳ್ಳಿ ಬೆಲೆಯನ್ನು ಟ್ರೋಲ್ ಮಾಡಿದ್ದರು. ಈಗ ಮತ್ತೇ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ. ಈಗಾಗಲೇ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆಜಿಗೆ 80 ರೂಪಾಯಿಯಂತೆ ಮಾರಾಟವಾಗುತ್ತಿದೆ. ಸದ್ಯ ಮಳೆಯಿಂದ ಈರುಳ್ಳಿ ಸಾಕಷ್ಟು ಹಾನಿಗೀಡಾಗಿದ್ದು, ಈ ವರ್ಷವೂ ಈರುಳ್ಳಿ ಬೆಲೆ ಗಗನಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈಗ ಪ್ರತಿ ಕೆಜಿಗೆ 50 ರೂಪಾಯಿಯಂತೆ ಸಾಧಾರಣ ರೀತಿಯಲ್ಲಿರುವ ಈರುಳ್ಳಿ ಮಾರಾಟವಾಗುತ್ತಿದ್ದರೆ, ಒಳ್ಳೆಯ ಈರುಳ್ಳಿ ಪ್ರತಿ ಕೆಜಿಗೆ 80 ರಿಂದ 90 ರೂಪಾಯಿಗೆ ಮಾರಾಟವಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಷ್ಟೇ ಪ್ರಸಕ್ತ ವರ್ಷ 28,905 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಆ ಪೈಕಿ 15022 ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಬೆಳೆ ಮಳೆಗೆ ಹಾನಿಗೀಡಾಗಿದ್ದು, ರೈತನಿಗೂ ನಷ್ಟ ಉಂಟು ಮಾಡುವುದರ ಜೊತೆಗೆ ಗ್ರಾಹಕರಿಗೂ ಈರುಳ್ಳಿ ಬೆಲೆ ಏರಿಕೆ ಬಿಸಿ ತಟ್ಟುವಂತೆ ಮಾಡಿದೆ.
ಮಳೆಯಿಂದಾಗಿ ಈರುಳ್ಳಿ ಹೊಲಗಳು ನೀರಲ್ಲಿ ನಿಂತಿದ್ದು, ಈರುಳ್ಳಿ ಗಡ್ಡೆ ಕೂಡ ಕೊಳೆಯುವಂತಾಗಿದೆ. ಮಾರುಕಟ್ಟೆಗೆ ಈರುಳ್ಳಿಯೇ ಬರದೇ ಹೋದರೆ ದರ ಕೂಡ ದುಬಾರಿಯಾಗಲಿದೆ. ತುಟ್ಟಿ ಈರುಳ್ಳಿ ಬೀಜ ಹಾಗೂ ಗೊಬ್ಬರ ಹಾಕಿ ಬೆಳೆದ ಈರುಳ್ಳಿ ಬೆಳೆಗಾರ ಇದೀಗ ಈರುಳ್ಳಿ ಹಾಕಿದ ತಪ್ಪಿಗೆ ಕಣ್ಣೀರು ಹಾಕುವಂತಾಗಿದೆ. ನವಲಗುಂದ ಹಾಗೂ ಕುಂದಗೋಳ ತಾಲೂಕಿನಾದ್ಯಂತ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಆದರೆ, ಈ ವರ್ಷ ಉಂಟಾಗಿರುವ ಮಳೆಯಿಂದ ಈ ಈರುಳ್ಳಿ ಬೆಳೆ ಮಳೆಯಲ್ಲಿ ನಿಂತು ದೊಡ್ಡ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿದೆ.
ಸದ್ಯ ಧಾರವಾಡದ ತೋಟಗಾರಿಕಾ ಇಲಾಖೆ 15022 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಹಾನಿಗೀಡಾಗಿದ್ದರ ಬಗ್ಗೆ ವರದಿ ಸಲ್ಲಿಸಿದ್ದು, ಎನ್ ಡಿಆರ್ ಎಫ್ ಗೈಡ್ಲೈನ್ಸ್ ಪ್ರಕಾರ ಒಣ ಭೂಮಿಯಲ್ಲಿ ಬೆಳೆದು ಹಾನಿಗೀಡಾದ ಈರುಳ್ಳಿ ಬೆಳೆಗೆ ಪ್ರತಿ ಹೆಕ್ಟೇರ್ ಗೆ 6800 ರೂಪಾಯಿ ಪರಿಹಾರ ಬರಲಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ದಿಡ್ಡಿಮನಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
ಒಣಬೇಸಾಯದಲ್ಲಿ ಬೆಳೆದ ಈರುಳ್ಳಿ ಬೆಳೆಯೇ ಸಂಪೂರ್ಣ ಹಾನಿಗೀಡಾಗಿದ್ದು, ಆ ಕುರಿತ ವರದಿ ಸಲ್ಲಿಕೆಯಾಗಿದೆ. ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ಅದ್ಯಾವಾಗ ಪರಿಹಾರ ಬಂದು ಕೈ ಸೇರುತ್ತೋ ಕಾದು ನೋಡಬೇಕಿದೆ.
Kshetra Samachara
18/10/2020 02:22 pm