ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಶುರುವಾದ ವರ್ಕ್ ಫ್ರಂ ಹೋಂ ದಂಪತಿಗೆ ವರವಾಗಿದೆ .ಕಳೆದ ಐದಾರು ವರ್ಷಗಳಿಂದ ಗರ್ಭಧರಿಸಲು ಹೆಣಗಾಡುತ್ತಿರುವ ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಚಿಕಿತ್ಸೆಗೆ ಒಳಗಾಗುತ್ತಿದ್ದ ಹಲವು ದಂಪತಿಗಳಿಗೆ ಲಾಕ್ ಡೌನ್ ಮತ್ತು ವರ್ಕ್ ಫ್ರಂ ಹೋಮ್ ಆಯ್ಕೆಯಿಂದಾಗಿ ನೈಸರ್ಗಿಕವಾಗಿ ಮಗು ಪಡೆದುಕೊಳ್ಳುವ ಬೆಳವಣಿಗೆಗಳು ಕಂಡು ಬರುತ್ತಿವೆ.
ನಮ್ಮ ಬಳಿ ಚಿಕಿತ್ಸೆಗಾಗಿ ಬಂದ ಶೇ.30ರಷ್ಟು ದಂಪತಿಗಳು ಲಾಕ್ ಡೌನ್ ಹಾಗೂ ವರ್ಕ್ ಫ್ರಂ ಹೋಮ್ ನಿಂದಾಗಿ ನೈಸರ್ಗಿಕವಾಗಿಯೇ ಗರ್ಭಧರಿಸಿ ಮಗು ಪಡೆದುಕೊಂಡಿದ್ದಾರೆಂದು ಫರ್ಟಿಲಿಟಿ ತಜ್ಞರು ಹೇಳಿದ್ದಾರೆ.
ಇದು ನಿಜಕ್ಕೂ ಶುಭ ಸಮಾಚಾರವಾಗಿದೆ. ಮಗುವಿನ ನಿರೀಕ್ಷೆಯಲ್ಲಿದ್ದ ಸಾಕಷ್ಟು ದಂಪತಿಗಳು ಐವಿಎಫ್ ತಂತ್ರವನ್ನು ಅಳವಡಿಸಿಕೊಳ್ಳಲು ನಮ್ಮ ಬಳಿ ಬಂದಿದ್ದರು. ಅದರಲ್ಲಿ ಹಲವು ಲಾಕ್ ಡೌನ್ ಹಾಗೂ ವರ್ಕ್ ಫ್ರಂ ಹೋಮ್ ನಿಂದಾಗಿ ನೈಸರ್ಗಿಕವಾಗಿಯೇ ಗರ್ಭಧರಿಸಿ ಮಗು ಪಡೆದುಕೊಂಡಿದ್ದಾರೆ. ಎಸ್ ಡಿಎಎಸಿ ನೋಂದಾಯಿತ ವೀರ್ಯ ಬ್ಯಾಂಕ್ ನ (ಎಆರ್ ಟಿ ಬ್ಯಾಂಕ್) ಡಾ ಪಲ್ಲವಿ ಎ ರಾವ್ ಅವರು ಹೇಳಿದ್ದಾರೆ.
ಭಾರತದಲ್ಲಿರುವ ಕೆಲ ದಂಪತಿಗಳು ಅಮೆರಿಕಾ ಹಾಗೂ ಬ್ರಿಟನ್ ರಾಷ್ಟ್ರಗಳ ಸಮಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುತ್ತಾರೆ. ಇದರಿಂದ ಜೀವನ ಶೈಲಿಗಳು ಬದಲಾಗುತ್ತವೆ. ಹೆಚ್ಚಿನ ಪ್ರಯಾಣ ಕೂಡ ಗರ್ಭಧಾರಣೆಯಲ್ಲಿ ಸಮಸ್ಯೆಯಾಗಲು ಕಾರಣವಾಗಬಹುದು. ಲಾಕ್ ಡೌನ್ ಹಾಗೂ ವರ್ಕ್ ಫ್ರಂ ಹೋಮ್ ನಿಂದ ಪ್ರಯಾಣ ಕಡಿಮೆಯಾಗಲಿದೆ. ಇದು ನೈಸರ್ಗಿಕವಾಗಿ ಗರ್ಭಧರಿಸಲು ಸಹಾಯಕವಾಗಿದೆ ಎಂದು ಬಿಜಿಎಸ್ ಗ್ಲೀಗಲ್ಸ್ ಗ್ಲೋಬಲ್ ಆಸ್ಪತ್ರೆಯ ಫರ್ಟಿಲಿಟಿ ತಜ್ಞೆ ಡಾ.ಸೌಮ್ಯ ಸಂಗಮೇಶ್ ಹೇಳಿದ್ದಾರೆ.
ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳದ ಹಾಗೂ ಚಿಕಿತ್ಸೆಯನ್ನು ಮುಂದೂಡಿದ್ದ ಮಹಿಳೆಯರು ಕೂಡ ಗರ್ಭಧರಿಸಿದ್ದಾರೆ. ಕಡಿಮೆಯಾದ ಮಾನಸಿಕ ಒತ್ತಡ ಹಾಗೂ ದಂಪತಿಗಳು ಹೆಚ್ಚು ಸಮಯ ಕಳೆದಿರುವುದು ಕೂಡ ಈ ಬೆಳವಣಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
PublicNext
27/09/2021 06:35 pm