ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರಿಗೂ ಆತಂಕ ಮೂಡಿದೆ. ಈಗ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ ಎಂದು ವೈದ್ಯರು ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. 92 ವರ್ಷ ವಯಸ್ಸು ಆಗಿರುವ ಕಾರಣ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಲತಾ ಮಂಗೇಶ್ಕರ್ ಅವರನ್ನು 10-12 ದಿನಗಳವರೆಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಕೊರೊನಾ ಮತ್ತು ನ್ಯುಮೋನಿಯಾ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.
‘ಅತ್ಯುತ್ತಮ ವೈದ್ಯರ ತಂಡ ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರ ಫೈಟರ್ ಮತ್ತು ವಿನ್ನರ್. ಆ ರೀತಿಯಲ್ಲೇ ನಾವು ಅವರನ್ನು ನೋಡಿಕೊಂಡು ಬಂದಿರುವುದು. ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿರುವ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಲತಾ ಮಂಗೇಶ್ಕರ್ ಕುಟುಂಬದವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಸಂಗೀತ ಕ್ಷೇತ್ರದಲ್ಲಿ 70 ದಶಕಗಳ ಕಾಲ ಸಕ್ರಿಯರಾಗಿದ್ದವರು ಲತಾ ಮಂಗೇಶ್ಕರ್. 13ನೇ ವಯಸ್ಸಿನಿಂದಲೇ ಅವರು ಗಾಯನ ಆರಂಭಿಸಿದ್ದರು. ಭಾರತ ರತ್ನ, ಪದ್ಮ ಭೂಷಣ, ಪದ್ಮ ವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ನೂರಾರು ಗೌರವಗಳು ಅವರಿಗೆ ಸಂದಿವೆ. 30 ಸಾವಿರಕ್ಕೂ ಅದಿಕ ಹಾಡುಗಳಿಗೆ ಲತಾ ಧ್ವನಿ ಆಗಿದ್ದಾರೆ.
PublicNext
13/01/2022 08:43 pm