ಹಾವೇರಿ : ನವೆಂಬರ್ 18ರಂದು ರಾಜ್ಯದೆಲ್ಲೆಡೆ ಕನಕದಾಸರ 537ನೇ ಜಯಂತಿ ಆಚರಿಸಲಾಗುತ್ತಿದೆ. ದಾಸಶ್ರೇಷ್ಠ ಕನಕದಾಸರು ಜನಿಸಿದ್ದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ. ಬೀರಪ್ಪ- ಬಚ್ಚಮ್ಮ ದಂಪತಿಯ ಮಗನಾಗಿ ಜನಿಸಿದ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಈ ತಿಮ್ಮಪ್ಪ ನಾಯಕ ಕನಕನಾಗಿದ್ದು ನಂತರ ಕನಕದಾಸನಾಗಿದ್ದು ಈಗ ಇತಿಹಾಸ.
ಬಾಡ ಗ್ರಾಮ ಕನಕದಾಸರ ಜನ್ಮಭೂಮಿಯಾದರೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ. ವಿಜಯನಗರ ಅರಸರ ಆಡಳಿತದಲ್ಲಿ ದಂಡನಾಯಕನಾಗಿದ್ದ ತಿಮ್ಮಪ್ಪನಾಯಕನಿಗೆ ಕನಕ ಸಿಕ್ಕಿದ್ದರಿಂದ ಕನಕನಾಗುತ್ತಾನೆ. ನಂತರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಕಂಡ ಹಿಂಸೆಯಿಂದಾಗಿ ಕನಕದಾಸನಾದರು.
ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಸಂತರು ಕನಕದಾಸರು. ಕನಕದಾಸರು ನಾಡು ಕಂಡ ಅಪ್ರತಿಮ ದಾಸರು. ದಾಸಶ್ರೇಷ್ಠರಲ್ಲಿ ಅತಿ ಶ್ರೇಷ್ಠರು ಕನಕದಾಸರು. ಇಂತಹ ಕನಕದಾಸರು ಇಂದಿನ ವಿದ್ಯಮಾನಗಳನ್ನ ಐದು ಶತಮಾನಗಳ ಮುಂಚೆ ತಮ್ಮ ಕೃತಿಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಅವರು ರಚಿಸಿದ ಕೃತಿಗಳು ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಪ್ರಸ್ತುತ ದಿನಗಳಲ್ಲಿಯೂ ಸಹ ಮೌಲ್ಯಯುತವಾಗಿದೆ.
PublicNext
18/11/2024 02:54 pm