ಚಂಡೀಗಢ: ಆಮ್ ಆದ್ಮಿ ಪಕ್ಷ (ಆಪ್) ಅಧಿಕಾರಕ್ಕೆ ಬಂದರೆ ಹೀಗೆ ಮಾಡಲಾಗುವುದು, ಹಾಗೆ ಮಾಡಲಾಗುವುದು ಎಂದು ಇದಾಗಲೇ ನೂರಾರು ಭರವಸೆಗಳನ್ನು ಕೊಡುತ್ತಲೇ ಬಂದಿದ್ದಾರೆ ದೆಹಲಿಯ ಸಿಎಂ ಅರವಿಂದ ಕೇಜ್ರಿವಾಲ್. ಇದೇ ಕಾರಣಕ್ಕೆ ಇವರನ್ನು ಭರವಸೆಗಳ ಸರದಾರ ಎಂದೇ ಹೇಳಲಾಗುತ್ತಿದೆ. ಆದರೆ ಭರವಸೆಗಳು ಮಾತ್ರ ಈಡೇರದೇ ಜನರು ರೋಸಿ ಹೋಗಿದ್ದಾರೆ. ಅದೇ ರೀತಿ ಪಂಜಾಬ್‍ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಪ್ನ ಪೊಳ್ಳು ಭರವಸೆ ಇಲ್ಲಿಯ ಶಿಕ್ಷಕಿಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಪಂಜಾಬ್‍ನಲ್ಲಿ ದೈಹಿಕ ಬೋಧಕ ತರಬೇತಿ ಪಡೆದ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಕ ಮಾಡುವಂತೆ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಯುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆಪ್, ತಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರತಿಭಟನೆ ನಡೆಸುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕರಿಗೆ ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ನೀಡುವುದಾಗಿ ಎಎಪಿ ಭರವಸೆ ನೀಡಿತ್ತು.
ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಪಂಜಾಬ್‍ನಲ್ಲಿ ಅಧಿಕಾರದ ಗದ್ದುಗೆ ಏರಿದ್ದಾರೆ ಆಪ್ನ ಭಗವಂತ್ ಮಾನ್. ಇವರು ಮುಖ್ಯಮಂತ್ರಿಯಾಗುವ ಪೂರ್ವದಲ್ಲಿ ಹಲವಾರು ಭರವಸೆಗಳನ್ನು ಜನರಿಗೆ ನೀಡಿದ್ದರು. ಆ ಪೈಕಿ ಒಂದು ಆಪ್ ಸರ್ಕಾರ, ಆದರೆ ಈ ಭರವಸೆ ಕೊಟ್ಟು ವರ್ಷವಾಗುತ್ತಾ ಬಂದರೂ ಉದ್ಯೋಗಕ್ಕಾಗಿ ಅಲೆದು ಅಲೆದು ಸೋತು ಹೋಗಿರುವ ಶಿಕ್ಷಕಿಯರಿಬ್ಬರು ಪ್ರಾಣ ತ್ಯಾಗಕ್ಕೆ ಮುಂದಾಗಿದ್ದಾರೆ.
ಪಂಜಾಬ್‍ನ ಮೋಹಾಲಿಯಲ್ಲಿ ನೀರಿನ ಟ್ಯಾಂಕ್ ಮೇಲೇರಿರುವ ಇಬ್ಬರು ಶಿಕ್ಷಕಿಯರು ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದುಕೊಂಡು ಪ್ರತಿಭಟನೆ ಮಾಡಿದರು. ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದರೂ ಭರವಸೆ ಈಡೇರಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶಿಕ್ಷಕಿಯರು ಹೇಳಿದ್ದಾರೆ. ನಂತರ ಅವರ ಮನವೊಲಿಸಿ ಕೆಳಕ್ಕೆ ಇಳಿಸಲಾಗಿದೆ.
ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಪ್ರತಿಭಟನಾನಿರತ ಆನಂದಪುರ ಸಾಹಿಬ್ ನಿವಾಸಿ ಸಿಪ್ಪಿ ಶರ್ಮಾ, ‘ನಮಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಉದ್ಯೋಗದ ಭರವಸೆ ಕೊಟ್ಟಿದ್ದರೂ ಈಡೇರಿಸಿರಲಿಲ್ಲ. ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ಆಪ್ ಅಧಿಕಾರಕ್ಕೆ ಬಂದಿದೆ. ಅದು ಕೂಡ ಉದ್ಯೋಗ ನೀಡುತ್ತಿಲ್ಲ. ಆದ್ದರಿಂದ ತೀವ್ರ ಸ್ವರೂಪದ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದಿದ್ದಾರೆ.
PublicNext
05/10/2022 06:21 pm