ಕಾಗವಾಡ ಮತಕ್ಷೇತ್ರದ ಜಂಬಗಿ ಗ್ರಾಮದಲ್ಲಿ ತಾಲ್ಲೂಕಾಡಳಿತದೊಂದಿಗೆ ಶಾಸಕ ಶ್ರೀಮಂತ ಪಾಟೀಲ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಿದರು.
ಈ ವೇಳೆ ಹೆಸ್ಕಾಂ ಇಲಾಖೆಯ ಬಗ್ಗೆ ರೈತರು ಶಾಸಕರ ಮುಂದೆ ತಮ್ಮ ಹಲವು ದೂರುಗಳನ್ನು ಹೇಳಿಕೊಂಡಾಗ ಶಾಸಕರು ಸ್ಥಳದಲ್ಲೇ ಇದ್ದ ಹೆಸ್ಕಾಂ ಅಧಿಕಾರಿಗೆ ಜನರ ಸಮಸ್ಯೆ ಬಗ್ಗೆ ತಮ್ಮ ಗಮನಕ್ಕೂ ಬಂದರೂ ಕೆಲಸ ಆಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೂಡಲೇ ರೈತರ ಹಾಗೂ ಸಾರ್ವಜನಿಕರ ವಿದ್ಯುತ್ ಗೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಡುವಂತೆ ಹೆಸ್ಕಾಂ ಅಧಿಕಾರಿ ಸಂಜಯ ದಾಸರ ಅವರಿಗೆ ಸೂಚನೆ ನೀಡಿದರು.
ರೈತರಿಗೆ 2019ರಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಮಂಜೂರಾದ ಟಿಸಿ ಮತ್ತು ಬೊರವೆಲ್ ಗಳಿಗೆ ವಿದ್ಯುತ್ ಸಂಪರ್ಕ ಇಲ್ಲಿಯವರೆಗೂ ನೀಡದೇ ಇರುವ ಬಗ್ಗೆ ಸಾರ್ವಜನಿಕರು ಶಾಸಕ ಗಮನಕ್ಕೆ ತಂದಾಗ ಗರಂ ಆದ ಶಾಸಕರು ಕೂಡಲೇ ಸಭೆಗೆ ಗೈರು ಹಾಜರಿದ್ದ ಅಥಣಿ ಹೆಸ್ಕಾಂ ಎಇಇ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಭೆಯ ಬಗ್ಗೆ ಮಾಹಿತಿ ಇದ್ದರೂ ಸಭೆಗೆ ಬರದೇ ಇರುವ ಬಗ್ಗೆ ಪ್ರಶ್ನಿಸಿ ನಿಮ್ಮ ಇಲಾಖೆಯಲ್ಲಿ ಸಾರ್ವಜನಿಕರ ಸಾಕಷ್ಟು ಸಮಸ್ಯೆಗಳ ದೂರುಗಳಿದ್ದು ಇದನ್ನ ಯಾರ ಮುಂದೆ ಹೇಳಬೇಕು ಇದರ ಬಗ್ಗೆ ಸಂಜೆಯೊಳಗೆ ಸಂಪೂರ್ಣ ನನಗೆ ಮಾಹಿತಿ ನೀಡಬೇಕು ಎಂದು ತರಾಟೆಗೆ ತೆಗೆದುಕೊಂಡರು.
ನಂತರ ಆರೋಗ್ಯ,ಕುಡಿಯುವ ನೀರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹೀಗೆ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಂದ ಬಂದ ದೂರುಗಳಿಂದ ಶಾಸಕರು ಸ್ಥಳದಲ್ಲೇ ಸಮಸ್ಯೆ ಪರಿಹರಿಸಿಕೊಡುವ ಕಾರ್ಯ ಮಾಡಿದರು.
ಈ ವೇಳೆ ತಹಶೀಲ್ದಾರ ಸುರೇಶ ಮುಂಜೆ, ಸಿಡಿಪಿಒ ಸಂಜಯಕುಮಾರ ಸದಲಗೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ್, ಪಿಎಸ್ಐ ಕುಮಾರ ಹಾಡಕಾರ, ವೆಂಕಟೇಶ ಕುಲಕರ್ಣಿ, ಶಾಂತಾ ಪೂಜಾರಿ, ವಿನಾಯಕ ಬಾಗಡಿ, ವಿನಾಯಕ ಪಾಟೀಲ್, ಆರ್ ಎಮ್ ಪಾಟೀಲ ಸೇರಿದಂತೆ ಅನೇಕ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
PublicNext
23/07/2022 12:02 pm