ಗದಗ: ಮಳೆಹಾನಿಯಿಂದ ತತ್ತರಿಸಿರೋ ಗದಗ ಜಿಲ್ಲೆಯ ಜನ ಆತಂಕದಲ್ಲಿದ್ದಾರೆ. ಮುಂಗಾರಿನಲ್ಲಿ ವಿಪರೀತ ಮಳೆಯಿಂದ ಬೆಳೆ ನಷ್ಟವಾಗಿ ಆರ್ಥಿಕ ಸಂಕಷ್ಟದಲ್ಲಿರೋ ಜಿಲ್ಲೆಯ ನಾನಾ ಭಾಗದ ರೈತರು ಜಿಲ್ಲಾಡಳಿತಕ್ಕೆ ಇಂದು ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಹೌದು, ಗದಗ ಜಿಲ್ಲಾಡಳಿತ ಎದುರು ಇಂದು ನೂರಾರು ರೈತರ ಆಕ್ರೋಶದ ಕಟ್ಟೆ ಒಡೆದಿತ್ತು. ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಭೇಟಿಯಾದ ಮಾರನೇ ದಿನವೇ ರೈತರ ತಾಳ್ಮೆಯ ಕಟ್ಟೆ ಒಡೆದಿದ್ದು, ತುರ್ತು ಪರಿಹಾರ ನೀಡುವಂತೆ ಒತ್ತಾಯಿಸಿದ್ರು. ಮುಂಗಾರು ಮಳೆ ನಮ್ಮ ಬೆಳೆಗಳನ್ನು ನುಂಗಿ ಹಾಕಿದೆ. ಹಿಂಗಾರಿನಲ್ಲಾದ್ರೂ ಬೆಳೆ ಬೆಳೆಯಬೇಕೇಂದ್ರೆ ಕೊಚ್ಚಿ ಹೋಗಿರುವ ಹೊಲ ಗದ್ದೆಗಳ ರಸ್ತೆ ಪುನರ್ ನಿರ್ಮಾಣ ಆಗಬೇಕು. ಹೊಲಗಳ ಒಡ್ಡು ಕಟ್ಟಬೇಕು. ಉತ್ತಮ ಬಿತ್ತನೆ ಬೀಜ ವಿತರಿಸಬೇಕು. ಜತೆಗೆ ಕನಿಷ್ಟ 10 ಸಾವಿರ ತುರ್ತು ಪರಿಹಾರವಾದ್ರೂ ಸರ್ಕಾರ ಘೋಷಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು.
ಜಿಲ್ಲೆಯಲ್ಲಿ ಸುರಿದ ಮಳೆಗೆ 817 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ.ಮಳೆಯಿಂದ 7 ಜನರ ಪ್ರಾಣ ಹಾನಿ,59 ಪ್ರಾಣಿಗಳು ಜೀವ ಕಳೆದುಕೊಂಡಿವೆ. 613 ಕಿಲೋಮೀಟರ್ ರಸ್ತೆ ಹಾಳಾಗಿದೆ.95 ಬ್ರಿಡ್ಜ್ ಕುಸಿದು ಗ್ರಾಮಗಳ ಸಂಪರ್ಕ ಕಡಿತವಾಗಿವೆ.ಜಿಲ್ಲೆಯಲ್ಲಿ 5 ಕೆರೆಗಳು ನಾಶವಾಗಿ,ಸಾವಿರಾರು ಮನೆಗಳು ಬಿದ್ದಿವೆ.174 ಪ್ರಾಥಮಿಕ ಶಾಲೆ,172 ಅಂಗನವಾಡಿ ಸೇರಿದಂತೆ ತೋಟಗಾರಿಕೆ, ಕೃಷಿ ಬೆಳೆ, ವಿದ್ಯುತ್ ಕಂಬಗಳು ನೆಲಕಚ್ಚಿವೆ.ಅಲ್ಲದೆ ರೈತರು ಖಾಸಗಿ ಕಂಪನಿಯಲ್ಲಿ ಬೆಳೆ ವಿಮೆ ಕೂಡ ಮಾಡಿಸಿದ್ದು,ಪೂರ್ಣ ಪ್ರಮಾಣದಲ್ಲಿ ವಿಮೆ ಬರಬೇಕು. ಬೆಳೆ ನಷ್ಟವಲ್ಲದೇ ಕುರಿ ದೊಡ್ಡಿ,ಹೈನುಗಾರಿಕೆಗೂ ಕೂಡ ಹಾನಿಯಾಗಿದ್ದು,ತುರ್ತು ಪರಿಹಾರ ಘೋಷಿಸಬೇಕು.ಇಲ್ಲವಾದರೆ ಕಪ್ಪುಬಟ್ಟೆ ಪ್ರದರ್ಶನ ಮಾಡಿ ಸಚಿವರ ವಿರುದ್ಧ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಹಾಗಾಗಿ ಅತೀ ಶೀಘ್ರದಲ್ಲಿ ಪರಿಹಾರ ದೊರೆತರೆ ರೈತರಿಗೂ ಕೊಂಚ ಸಮಾಧಾನ.ಈ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತ ಇಚ್ಛಾಶಕ್ತಿ ವಹಿಸಬೇಕಿದೆ.
PublicNext
12/09/2022 08:06 pm