ಗದಗ: ಉತ್ತರ ಕರ್ನಾಟಕ ಸಹ್ಯಾದ್ರಿ ಪರ್ವತ, ಔಷಧಿಯ ಸಸ್ಯಕಾಶಿ, ಖನಿಜ ಸಂಪನ್ಮೂಲಗಳ ಖಜಾನೆ ಎಂದೇ ಖ್ಯಾತಿ ಪಡೆದ ಕಪ್ಪತ್ತಗುಡ್ಡಕ್ಕೆ ಕಂಟಕ ಶುರುವಾದಂತಿದೆ.
ಗದಗ ಜಿಲ್ಲೆಯಲ್ಲಿ ಸುಮಾರು 69 ಕಿಲೋಮೀಟರ್ ನಷ್ಟು ವ್ಯಾಪ್ತಿಯಲ್ಲಿ ಕಪ್ಪತಗುಡ್ಡ ವ್ಯಾಪಿಸಿದೆ. ವನ್ಯಜೀವಿ ಧಾಮ ಎಂದು ಸಹ ಘೋಷಣೆ ಮಾಡಲಾಗಿದೆ. ಕಪ್ಪತ್ತಗುಡ್ಡ ವ್ಯಾಪ್ತಿಯಿಂದ ಸರೌಂಡಿಂಗ್ 09 ಕಿಲೋಮೀಟರ್ ವರೆಗೆ ಡೀಮ್ಡ್ ಅರಣ್ಯ ಪ್ರದೇಶವಿದೆ. ಆದ್ರೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಅರಣ್ಯಾಧಿಕಾರಿಗೆ 24 ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಬೇಕು ಅಂದ್ರೆ ಕೇಂದ್ರ ವನ್ಯಜೀವಿ ಮಂಡಳಿ ಅವಕಾಶ ನೀಡಬೇಕು. ಜೊತೆಗೆ ರಾಜ್ಯ ಸಚಿವ ಸಂಪುಟದ ಅನುಮತಿ ಬೇಕು. ಹೀಗಾಗಿ ಬಂದಿರುವ ಅರ್ಜಿಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಿದ್ದೇವೆ ಅಂತಿದ್ದಾರೆ ಅರಣ್ಯಾಧಿಕಾರಿಗಳು.
ಕಪ್ಪತ್ತಗುಡ್ಡದಲ್ಲಿ ಈ ಮೊದಲು ಮ್ಯಾಂಗನೀಸ್, ಗೋಲ್ಡ್ ಮೈನಿಂಗ್ ಸಹ ನಡೆದಿದೆ. ವಿಂಡ್ ಫ್ಯಾನ್ ಸಹ ಅಳವಡಿಕೆ ಮಾಡಲಾಗಿದೆ. ಪರಿಸರವಾದಿಗಳು, ಮಠಾಧೀಶರ ಹೋರಾಟದ ಫಲವಾಗಿ ಗಣಿಗಾರಿಕೆ ಬಂದ್ ಆಗಿ, ವನ್ಯಜೀವಿ ಧಾಮ ಘೋಷಣೆ ಮಾಡಲಾಯಿತು. ಈಗ ಮತ್ತೆ ಸಂಪತ್ತನ್ನು ಲೂಟಿ ಮಾಡಲೆಂದೇ ನಾನಾ ಕಂಪನಿಗಳು ಸಂಚು ರೂಪಿಸಿವೆ. ಈಗಾಗಲೇ ಬಲ್ದೋಟಾ ಎಂಬ ಬಹುದೊಡ್ಡ ಕಂಪನಿ ಗಣಿಗಾರಿಕೆ ನಡೆಸಲು ಲಾಭಿ ಮಾಡಿತ್ತು. ಸ್ಥಳೀಯ ವಿರೋಧದಿಂದ ಹಿಂದೆಯೂ ಸರಿದಿತ್ತು. ಹಾಗಾಗಿ ಈ ಭಾಗದಲ್ಲಿ ಗಣಿಗಾರಿಕೆಗೆ ಅವಕಾಶ ಬೇಡವೇ ಬೇಡ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ವನ್ಯಜೀವಿ ಧಾಮ ಹಾಗೂ ಮೀಸಲು ಅರಣ್ಯ ವ್ಯಾಪ್ತಿಯ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶವಿಲ್ಲ. ಆದ್ರೆ ಇದಕ್ಕೆ ರಾಜಕೀಯ ಲಾಭಿ ಶುರವಾಗಿದೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದ ಈ ಕಪ್ಪತಗುಡ್ಡ ರಕ್ಷಣೆಗೆ ರಾಜಕಾರಣಿಗಳು ತಮ್ಮ ಇಚ್ಛಾಶಕ್ತಿಯನ್ನೂ ತೋರಿಸಬೇಕಿದೆ.
PublicNext
12/09/2022 01:41 pm