ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡದ ಅಪ್ಪಟ " ಬಂಗಾರದ ಮನುಷ್ಯ '' ನನ್ನು ನೆನೆದಾಗ...

ಪಬ್ಲಿಕ್ ನೆಕ್ಸ್ಟ್ ರಾಜ್ ಸ್ಮರಣೆ : ಕೇಶವ ನಾಡಕರ್ಣಿ

ಪಾತ್ರದ ಪರಕಾಯ ಪ್ರವೇಶವೆಂದರೆ ನಮ್ಮ ಅಣ್ಣಾವ್ರು. ಐತಿಹಾಸಿಕ, ಪೌರಾಣಿಕ ಧಾರ್ಮಿಕ ಹೀಗೆ ಯಾವುದೇ ಪಾತ್ರವಿರಲಿ ಕಣ್ಣಿಗೆ ಕಟ್ಟುವಂತಿವೆ. ಶ್ರೀರಾಮ ,ಶ್ರೀಕೃಷ್ಣ, ತಿರುಪತಿ ವೆಂಕಟೇಶ್ವರ ಅರ್ಜುನ ,ಬಬ್ರುವಾಹನ, ಶ್ರೀಕೃಷ್ಣದೇವರಾಯ, ಕವಿರತ್ನ ಕಾಳಿದಾಸ, ರಣಧೀರ ಕಂಠೀರವ, ಮಯೂರ, ಹುಲಿಯ ಹಾಲಿನ ಮೇವು, ಸನಾದಿ ಅಪ್ಪಣ್ಣ, ಶ್ರೀರಾಘವೇಂದ್ರ ಸ್ವಾಮಿಗಳು, ಒಂದೇ ಎರಡೇ ಹೀಗೆ ಅನೇಕ ಐತಿಹಾಸಿಕ ಹಾಗೂ ಪೌರಾಣಿಕ ಯುಗಪುರುಷರ ಮೂರ್ತಿವೆತ್ತಂತ್ತಿದ್ದರು ನಮ್ಮ ನಟಸಾರ್ವಭೌಮ ರಾಜಕುಮಾರ.

ದಾಸಪರಂಪರೆಯ ಭಕ್ತ ಕನಕದಾಸರಾಗಿಯೂ ಜನಮಾನಸದಲ್ಲಿ ಅಚ್ಚಳಿಯಾಗಿ ಉಳಿದಿರುವ ರಾಜಕುಮಾರ್ ಇಂದು ನಮ್ಮೊಡನಿದ್ದರೆ 94 ವರ್ಷಗಳಾಗುತ್ತಿದ್ದವು.ಆದರೂ " ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು '' ಹಾಡಿನ ಮೂಲಕ ನಮ್ಮ ಮಧ್ಯದಲ್ಲಿದ್ದಾರೆ.

ಬೇಡರ ಕಣ್ಣಪ್ಪನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಕನ್ನಡಿಗರ ಹೃದಯ ಸಾಮ್ರಾಜ್ಯವನ್ನಾಳಿದರು. ವಿಧೆಯತೆ, ವಿನಯತೆಗೆ ಮತ್ತೊಂದು ಹೆಸರೆ ನಮ್ಮ ಮುತ್ತುರಾಜ ಎಂದರೂ ಅತಿಶಯೋಕ್ತಿಯಾಗದು. ಅವರ 200 ಚಿತ್ರಗಳೂ ಮುತ್ತು ರತ್ನ. ಇವರ ವ್ಯಕ್ತಿತ್ವಕ್ಕೆ ತಕ್ಕಂತೆಯೆ ಕೆಲವು ಪಾತ್ರಗಳು ಸೃಷ್ಟಿಯಾಗುತ್ತಿದ್ದವು.

ಕನ್ನಡ ಚಿತ್ರರಂಗದ ಇಮ್ಮಡಿ ಪುಲಕೇಶಿ " ಬಂಗಾರದ ಮನುಷ್ಯ'' ನಾಗಿ " ಗಂಧದ ಗುಡಿ'' ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಿ, ಸಂಪತ್ತಿಗೆ ಸವಾಲು ಹಾಕಿ ಜನಮನ ಗೆದ್ದವರು. ಜೇಡರ ಬಲೆ ಮೂಲಕ ಕನ್ನಡಕ್ಕೆ ಬಾಂಡ್ ಚಿತ್ರಗಳನ್ನು ಕೊಟ್ಟ ಖ್ಯಾತಿಯೂ ಅಣ್ಣಾವ್ರದು. " ಗೋವಾದಲ್ಲಿ ಸಿಐಡಿ 999 ಸೇರಿದಂತೆ ಆಪರೇಷನ್ ಡೈಮಂಡ್ ರಾಕೇಟ್'' ಬಾಂಡ ಚಿತ್ರಗಳು ದಾಖಲೆ ಸೃಷ್ಟಿಸಿದವು.

ಪಂಡರಿಬಾಯಿ, ಲೀಲಾವತಿ ಜಯಂತಿ ,ಭಾರತಿ ಸೇರಿದಂತೆ ಕನ್ನಡದ ಬಹುತೇಕ ನಟಿಯರೊಂದಿಗೆ ನಟಿಸಿದ ಖ್ಯಾತಿ ಇವರದು. ನಾಯಕಿಯಾಗಿ ನಟಿಸಿದ ಪಂಡರಿಬಾಯಿ ರಾಜ್ ತಾಯಿಯಾಗಿಯೂ ಅಭಿನಯಿಸಿದ್ದರು. ಪಾತ್ರದಲ್ಲಿ ರಾಜ್ ಎಷ್ಟು ತಲ್ಲೀನರಾಗಿರುತ್ತಿದ್ದರೆಂದರೆ, ಭಾಗ್ಯವಂತ ಚಿತ್ರದಲ್ಲಿ ಇವರ ಮಗಳಾಗಿ ನಟಿಸಿದ್ದ ಓರ್ವ ನಟಿ, ದೃಶ್ಯವೊಂದರಲ್ಲಿ ಅವರ ಉಗ್ರರೂಪ ನೋಡಿ ಒಂದು ವಾರ ರಾಜ್ ಅವರನ್ನು ಎದುರಿಸಲು ಭಯಪಟ್ಟಿದ್ದರಂತೆ.

ಕವಿರತ್ನ ಕಾಳಿದಾಸ ಚಿತ್ರದಲ್ಲಿ ರಾಜ್ ದೇವತೆಗೆ ನಮಸ್ಕರಿಸಬೇಕಾಗಿತ್ತು. ಆದರೆ ದೇವತೆ ಪಾತ್ರವಹಿಸಿದ್ದ ನಟಿ ರಾಜ್ ಅವರಿಂದ ನಮಸ್ಕರಿಸಿಕೊಳ್ಳಲು ಸುತಾರಾಂ ಒಪ್ಪಿರಿಲಿಲ್ಲವಂತೆ. ನಂತರ ರಾಜ್ ಅವರೇ ಸಮಜಾಯಿಸಿದಾಗ ಮುಜುಗರದಿಂದ ಒಪ್ಪಿದ್ದರಂತೆ. ಇಂತಹ ಘಟನೆಗಳು ನೂರಾರು.

ಕರ್ನಾಟಕದಲ್ಲಿ ಯಾವುದೇ ಹೊಸ ಟಾಕೀಸ್ ಆರಂಭವಾದರೂ ಡಾ: ರಾಜಕುಮಾರ್ ಚಿತ್ರದಿಂದಲೇ ಆಗಬೇಕೆನ್ನುವುದು ಮಾಲಿಕರ ಹಟವಾಗಿತ್ತು. ರಾಜ್ ಚಿತ್ರವಿಲ್ಲದ್ದಕ್ಕಾಗಿ ಹುಬ್ಬಳ್ಳಿಯ ಶೃಂಗಾರ ಹಾಗೂ ಅಪ್ಸರಾ ಥೇಟರುಗಳ ಉದ್ಘಾಟನೆ ಮುಂದಕ್ಕೆ ಹೋಗಿತ್ತಂತೆ. ರಾಜ್ ಅವರ ಚಿತ್ರದ ಮೊದಲ ದಿನದ ಮೊದಲ ಶೋ ನೋಡಲು ಪೈಪೋಟಿ ನಡೆಯುತ್ತಿತ್ತು. ಯಾವುದೇ ಚಿತ್ರವಾದರೂ 25 ವಾರಗಳು ಓಡಲೇಬೇಕು. ಬಂಗಾರದ ಮನುಷ್ಯ ಹುಬ್ಬಳ್ಳಿ ಸಂಗೀತ ಟಾಕೀಸಿನಲ್ಲಿ ಎರಡು ವರ್ಷ ಓಡಿತ್ತು.

ಪಾತ್ರಧಾರಿಯಾಗಿಯೂ ರಾಜ್ ಧೂಮಪಾನ, ಮದ್ಯಪಾನ ಮಾಡಲು ಒಪ್ಪುತ್ತಿರಲಿಲ್ಲವಂತೆ. ಚೂರಿ ಚಿಕ್ಕಣ ಪತ್ತೆದಾರಿ ಚಿತ್ರದಲ್ಲಿ ರಾಜ್ ಸಿಗರೇಟ್ ಸೇದಲೇಬೇಕಾದ ದೃಶ್ಯವಿತ್ತು. ಜಪ್ಪಯ್ಯ ಅಂದರೂ ರಾಜ್ ಒಪ್ಪಿರಲಿಲ್ಲವಂತೆ. ನಿರ್ದೇಶಕರ ಒತ್ತಾಯಕ್ಕೆ ಮಣಿದು ತೋರಿಕೆಗಾಗಿ ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು ನಟಿಸಿದ್ದರೂ, ನಾನು ತಪ್ಪು ಮಾಡಿದೆನಲ್ಲ ಎಂಬ ಅಪರಾಧ ಮನೋಭಾವನೆ ಕಾಡಿತ್ತಂತೆ.

ರಾಜ್ ನಾಟಿಕೋಳಿ ಪ್ರಿಯರು. ಆದರೆ ಮಂತ್ರಾಲಯ ಮಹಾತ್ಮೆ ಚಿತ್ರಕ್ಕಾಗಿ ಮಾಂಸಾಹಾರವನ್ನು ತ್ಯಜಿಸಿದ್ದರಂತೆ.

ನಾಟಕಗಳಲ್ಲಿ ನಟನಟಿಯರು ಖುದ್ದಾಗಿ ಹಾಡಬೇಕಾಗಿತ್ತು. ಅದೇ ಮುಂದೆ ರಾಜ್ ಅವರಿಗೆ ವರವಾಗಿ ಪರಿಣಮಿಸಿತು. ಸಂಪತ್ತಿಗೆ ಸವಾಲು ಚಿತ್ರದ " ಯಾರೇ ಕೂಗಾಡಲಿ '' ಹಾಡು ಅವರನ್ನು ಗಾಯಕ ನಟನಾಗಿ ರೂಪಿಸಿತು. ನಂತರ ಹೆಜ್ಜೆ ಹಿಂದಿಟ್ಟಿದ್ದೇ ಇಲ್ಲ. ತಮ್ಮ ಎಲ್ಲ ಚಿತ್ರಗಳೊಂದಿಗೆ ಇತರೆ ನಾಯಕರಿಗಾಗಿಯೂ ಹಾಡಿದರು. ಜೀವನ ಚೈತ್ರ ಚಿತ್ರದ " ನಾದಮಯ '' ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು.

ಕಾಡುಗಳ್ಳ ವೀರಪ್ಪನ್ ರಾಜ್ ರನ್ನು ಅಪಹರಿಸಿ 108 ದಿನಗಳ ಕಾಲ ಒತ್ತೆಯಾಳಾಗಿಟ್ಟುಕೊಂಡಿದ್ದ. ಆಗ ಸಂಪೂರ್ಣ ಕರುನಾಡೆ ವಿಲಿವಿಲಿ ಒದ್ದಾಡಿತ್ತು. ತಮ್ಮ ಆರಾಧ್ಯದೈವನ ಬಿಡುಗಡೆಗಾಗಿ ಕನ್ನಡಿಗರು ನಿತ್ಯ ಹೋಮಹವನ ಮಾಡಿದ್ದರು.

ರಾಜ್ ಶರೀರ ಆಗಿದ್ದರೆ ಪಿ.ಬಿ ಶ್ರೀನಿವಾಸ್ ಶಾರೀರವಾಗಿದ್ದರು. ಬಬ್ರುವಾಹನದಲ್ಲಿ ಪಿಬಿಎಸ್ ಗೆ ಸರಿಸಮವಾಗಿ ಹಾಡಿ ದಾಖಲೆ ನಿರ್ಮಿಸಿದರು. ಸಾಲು ಸಾಲು ಪ್ರಶಸ್ತಿಗಳು ರಾಜಣ್ಣನನ್ನು ಹುಡುಕಿಕೊಂಡು ಬಂದವು. ಇವರ ಮುಡಿಗೇರಿ ಇನ್ನೂ ಕೆಲವು ಪ್ರಶಸ್ತಿಗಳು ತಮ್ಮ ಗೌರವ ಹೆಚ್ಚಿಸಿಕೊಂಡವು.

ಅಂತಹ ಕನ್ನಡದ ಕಣ್ಮಣ್ಣಿ, ರಸಿಕರ ರಾಜ, ಯೋಗರಾಜನ ಜನ್ಮದಿನ. ಸೂರ್ಯ ಚಂದ್ರರಿರುವವರೆಗೆ ರಾಜ್ ಅಜರಾಮರ.

Edited By :
PublicNext

PublicNext

24/04/2022 12:01 pm

Cinque Terre

42.6 K

Cinque Terre

7

ಸಂಬಂಧಿತ ಸುದ್ದಿ