ಕೆಜಿಎಫ್ 2 ನಂತರ ರಾಕಿಂಗ್ ಸ್ಟಾರ್ ಯಶ್ ಯಾವ ಮತ್ತು ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನುವುದು ಸಸ್ಪೆನ್ಸ್ ಆಗಿಯೇ ಉಳಿದಿದೆ. ನರ್ತನ್, ಶಂಕರ್ ಸೇರಿದಂತೆ ಹಲವು ನಿರ್ದೇಶಕರ ಚಿತ್ರಗಳ ಹೆಸರು ಕೇಳಿ ಬಂದರೂ, ಯಾವುದೂ ಅಂತಿಮವಾಗಿಲ್ಲ. ಅಲ್ಲದೇ, ಹಲವು ನಿರ್ಮಾಪಕರು ಕೂಡ ಯಶ್ ಸಿನಿಮಾ ಮಾಡಲು ಮುಂದೆ ಬಂದರೂ, ರಾಕಿಭಾಯ್ ಮಾತ್ರ ಮೌನಕ್ಕೆ ಜಾರಿದ್ದಾರೆ. ಹಾಗಾಗಿ ಮುಂದಿನ ಸಿನಿಮಾ ಯಾವುದು ಎನ್ನುವುದು ಯಕ್ಷಪ್ರಶ್ನೆಯಾಗಿದೆ
ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ನರ್ತನ್ ನಿರ್ದೇಶನದ ಸಿನಿಮಾ ಹೆಸರು ಘೋಷಣೆ ಆಗಬೇಕಿತ್ತು. ಕಳೆದ ಎರಡು ವರ್ಷಗಳಿಂದ ಯಶ್ ಗಾಗಿಯೇ ನರ್ತನ್ ಕಥೆ ಬರೆಯುತ್ತಿದ್ದಾರೆ. ಇದೇ ಸಿನಿಮಾ ಅಂತಿಮವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಆ ಸಿನಿಮಾವನ್ನೂ ಯಶ್ ಮುಂದೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ.
ಸದ್ಯ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಓಡಾಡುತ್ತಿದ್ದು, ಸೆಪ್ಟಂಬರ್ 2 ರಂದು ಯಶ್ ತಮ್ಮ ಹೊಸ ಸಿನಿಮಾವನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಸುದ್ದಿಗಳು ಈಗಾಗಲೇ ಹಲವು ಬಾರಿ ಬಂದರೂ, ಈ ಬಾರಿ ಮಿಸ್ ಆಗುವುದಕ್ಕೆ ಚಾನ್ಸೇ ಇಲ್ಲ ಎಂದು ಹೇಳಲಾಗುತ್ತಿದೆ. ಸೆಪ್ಟಂಬರ್ 2 ರಂದು ರಾಕಿ ಭಾಯ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯನ್ನೇ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿಯಾದರೂ ಸುದ್ದಿ ನಿಜವಾಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
PublicNext
23/08/2022 01:33 pm