ಅಭಿನವ ಚಕ್ರವರ್ತಿ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಕನ್ನಡಲ್ಲಿ ಅಷ್ಟೇ ಅಲ್ಲ ತೆಲುಗು ಹಾಗೂ ಬಾಲಿವುಡ್‌ನಲ್ಲೂ ಕಿಚ್ಚ ಸುದೀಪ್ ಉತ್ತಮ ಹೆಸರು ಮಾಡಿದ್ದಾರೆ. ಈ ಸಾಧನೆಗಾಗಿ ಅವರಿಗೆ ಅನೇಕರಿಂದ ಗೌರವ, ಸನ್ಮಾನಗಳು ಸಿಕ್ಕಿವೆ. ಇದೀಗ ಕಿಚ್ಚ ಸುದೀಪ್ ಅವರ ಸಾಧನೆಯನ್ನು ಗುರುತಿಸಲು ಭಾರತೀಯ ಅಂಚೆ ಇಲಾಖೆಯಿಂದ ‘ವಿಶೇಷ ಅಂಚೆ ಲಕೋಟೆ’ ಬಿಡುಗಡೆ ಮಾಡಲಾಗುತ್ತಿದೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತರಲಿದೆ.
ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ ಈ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತದೆ. ಈ ಲಿಸ್ಟ್‌ನಲ್ಲಿ ನಮ್ಮ ಸ್ಯಾಂಡಲ್ವುಡ್ ನಟ ಸುದೀಪ್ ಸೇರಿಕೊಂಡಿರೋದು ನಿಜಕ್ಕೂ ಹೆಮ್ಮೆ ಹಾಗೂ ಸಂತಸದ ವಿಚಾರವಾಗಿದೆ.
25 ವರ್ಷಗಳ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ರಾಷ್ಟ್ರತಾರೆ ಸುದೀಪ್ ಅವರ ಸಾಧನೆಯನ್ನು ಸಹ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ. ಆ ನಿಮಿತ್ತ ಇಂದು ಅಂಚೆ ಇಲಾಖೆಯ ಅಧೀಕ್ಷರಾದ ಶ್ರೀ ಮಾದೇಶ್ ಅವರು ಕಿಚ್ಚ ಸುದೀಪ್ ಮನೆಗೆ ಆಗಮಿಸಿ ಅವರಿಂದ NOC ಯನ್ನು ಪಡೆದರು ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.
ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ. ಕಿಚ್ಚ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೃದಯತುಂಬಿ ಶ್ಲಾಘಿಸುತ್ತಿದ್ದಾರೆ.
PublicNext
31/08/2022 08:21 pm