ಬೆಂಗಳೂರು: ನಿಗದಿತ ಪಠ್ಯ ಬೋಧನೆಯ ಜೊತೆಜೊತೆಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಬಹುತೇಕ ಖಾಸಗಿ ಪದವಿಪೂರ್ವ ಕಾಲೇಜುಗಳು ‘ಇಂಟಿಗ್ರೇಟೆಡ್ ಕೋಚಿಂಗ್’ ಪದ್ಧತಿ ಅಳವಡಿಸಿಕೊಂಡಿವೆ. ವಿದ್ಯಾರ್ಥಿಗಳ ಹಿತಾಸಕ್ತಿಗೆ ಪೂರಕವಾಗಬೇಕಿದ್ದ ಈ ಪದ್ಧತಿಯು ಲಾಭದಾಯಕ ಚಟುವಟಿಕೆಯಾಗಿ ರೂಪುಗೊಂಡಿರುವುದು ಕಳವಳ ಹುಟ್ಟಿಸುವ ಸಂಗತಿ. ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು 'ಇಂಟಿಗ್ರೇಟೆಡ್ ಕೋಚಿಂಗ್'ಗೆ ಕಡಿವಾಣ ಹಾಕಲು ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ.
ಪಠ್ಯದ ಜೊತೆ ನೀಟ್, ಜೆಇಇ ಮತ್ತು ಸಿಇಟಿಗೆ ತರಬೇತಿ ನೀಡುವ ಇಂಟೆಗ್ರೇಟೆಡ್ ಕೋಚಿಂಗ್ ವ್ಯವಸ್ಥೆಯನ್ನು ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಕೋಚಿಂಗ್ ವ್ಯವಸ್ಥೆ ಪದ್ಧತಿ ಜಾರಿಗೊಳಿಸುವ ಮೂಲಕ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ಪಡೆಯಲಾಗುತ್ತಿದೆ. ಹೀಗಾಗಿ ಇಂಟೆಗ್ರೇಟೆಡ್ ಕೋಚಿಂಗ್‌ಗೆ ಅವಕಾಶ ಇಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿಯಮಾವಳಿ ರೂಪಿಸಿದೆ. ಆದರೆ ಈ ನಿಯಮಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಎಂಬ ಗುಮಾನಿಯೂ ಹರಿದಾಡುತ್ತಿದೆ.
ಗೈಡ್‌ಲೈನ್ಸ್‌ನಲ್ಲಿ ಏನೇನಿದೆ.?
* ಪಿಯು ಕಾಲೇಜುಗಳಲ್ಲಿ ಸಿಇಟಿ, ಜೆಇಇ, ನೀಟ್, ಇಂಟೆಗ್ರೆಟೆಡ್ ಕೋರ್ಸ್, ಬ್ರಿಡ್ಜ್ ಕೋರ್ಸ್ ಇತ್ಯಾದಿ ಹೆಸರಿನಲ್ಲಿ ಕಾನೂನು ಬದ್ಧವಾಗಿ ನಿಗದಿಪಡಿಸಿದ ಶುಲ್ಕ ಮಾತ್ರ ಸ್ವೀಕರಿಸಬೇಕು.
* ಇತರೆ ಸಂಘ ಸಂಸ್ಥೆ ಅಥವಾ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸೇರಿ ಬೋಧನೆ ಮಾಡುವುದು ಕಂಡು ಬಂದಲ್ಲಿ ಕಾಲೇಜಿನ ಮಾನ್ಯತೆ ರದ್ದು ಮಾಡಲಾಗುವುದು. ಅಷ್ಟೇ ಅಲ್ಲದೆ ಈ ಸಂಸ್ಥೆಗಳ ಪ್ರಾಂಶುಪಾಲರ ಮತ್ತು ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ ಕೈಕೊಳ್ಳಲಾಗುವುದು.
* ನಿಗದಿಪಡಿಸಿದ ಪಠ್ಯಕ್ರಮವನ್ನು ಹೊರತುಪಡಿಸಿ ಇತರೆ ಯಾವುದೇ ಪಠ್ಯಕ್ರಮ ಬೋಧಿಸಬಾರದು. ಇದರ ಹೊರತಾಗಿಯೂ ಪಠ್ಯೇತರ ಬೋಧನೆ ಕಂಡು ಬಂದರೆ ಸಂಸ್ಥೆಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ ಖಚಿತ.
* ಪರಸ್ಪರ ವಿನಿಯಮದೊಂದಿಗೆ ಆ ಸಂಸ್ಥೆಯ ಹೆಸರನ್ನು ತಮ್ಮ ಕಾಲೇಜಿನ ಜತೆ ಬಳಕೆ ಮಾಡಿ ಯಾವುದೇ ರೀತಿ ಶೈಕ್ಷಣಿಕ ಚಟುವಟಿಕೆ ನಡೆಸುವಂತಿಲ್ಲ. ಬೇರೆ ಪಠ್ಯ ವಸ್ತುವನ್ನು ಖರೀದಿಸಲು ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಒತ್ತಡ ಹೇರುವಂತಿಲ್ಲ.
PublicNext
09/06/2022 10:49 am