ದಾವಣಗೆರೆ: ಹಣದ ದುರಾಸೆಗೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಆಜಾದ್ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಇಮಾಮ್ ನಗರದ ನಿವಾಸಿ ದುಗ್ಗೇಶಿ (32) ಕೊಲೆಯಾದವರು. ಬಂಬೂ ಬಜಾರ್ ರಸ್ತೆಯ ಗಣೇಶ, ಹರಳಯ್ಯ ನಗರದ ಅನಿಲ, ಹಳೆ ಚಿಕ್ಕನಹಳ್ಳಿಯ ಶಿವಕುಮಾರ್, ಭಾರತ್ ಕಾಲೊನಿಯ ಮಾರುತಿ ಬಂಧಿತರು. ಕೃತ್ಯಕ್ಕೆ ಉಪಯೋಗಿಸಿದ್ದ ಪಲ್ಸರ್ ಬೈಕ್ ವಶ ಪಡಿಸಿಕೊಳ್ಳಲಾಗಿದೆ.
ದುಗ್ಗೇಶಿ ಹೆಸರಲ್ಲಿ ಅವರ ಸಂಬಂಧಿಯಾದ ಗಣೇಶ್, ದಾವಣಗೆರೆ ಆಕ್ಸಿಸ್ ಬ್ಯಾಂಕ್‌ನಲ್ಲಿ ಇನ್ಶುರೆನ್ಸ್ ಬಾಂಡ್ ಮಾಡಿಸಿದ್ದರು. ಕೊಲೆ ಮಾಡಿದರೆ ಬಾಂಡ್ ಮೊತ್ತ ₹ 40 ಲಕ್ಷ ಸಿಗುತ್ತದೆ ಎಂಬ ದುರಾಸೆಯಿಂದ ತನ್ನ ಸ್ನೇಹಿತರ ಜೊತೆ ಸೇರಿ ದುಗ್ಗೇಶಿ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಮನೆಯ ಬಳಿ ತಂದು ಹಾಕಿದ್ದರು. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ನವೆಂಬರ್ 4ರಂದು ಪ್ರಕರಣ ದಾಖಲಾಗಿತ್ತು.
ಇನ್‌ಸ್ಪೆಕ್ಟರ್ ಅಶ್ವಿನ್ ಕುಮಾರ್ ಆರ್.ಜಿ., ಪಿಎಸ್‌ಐ ಇಮ್ತಿಯಾಜ್ ಹಾಗೂ ಸಿಬ್ಬಂದಿ ನರೇಶ್ ಎ.ಪಿ., ಮಂಜುನಾಥ ನಾಯ್ಕ, ಕೃಷ್ಣ ನಂದ್ಯಾಲ್, ವೆಂಕಟೇಶ್ ಜಿ.ಆರ್., ಗುಗ್ಗರಿ ಲೋಕೇಶ್, ಖಾಜಾ ಹುಸೇನ್, ಸಲಾವುದ್ದೀನ್, ಮಹಾಂತೇಶ್ ಕೆಳಗಿನಮನಿ, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ರಾಮಚಂದ್ರ ಜಾಧವ, ರಾಘವೇಂದ್ರ, ಶಾಂತರಾಜ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
PublicNext
07/11/2024 07:43 am