ದಾವಣಗೆರೆ: ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳನ್ನು ಹೊಂಚು ಹಾಕಿ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಡಾವಣೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಾಂತಿ ನಗರದ ನಿವಾಸಿ ಕಿರಣ್ ನಾಯ್ಕ (25) ಹಾಗೂ ವಿನೋದ್ ನಾಯ್ಕ (23) ಬಂಧಿತರು. ಆರೋಪಿಗಳಿಂದ ₹ 5.3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 1.2 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕಿರಣ್ ನಾಯ್ಕ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ 5, ಬಡಾವಣೆಯ ಠಾಣೆಯಲ್ಲಿ 4, ಗಾಂಧಿನಗರ, ಕೆಟಿಜೆ ನಗರ ಹಾಗೂ ಬಸವನಗರ ಠಾಣೆಯಲ್ಲಿ ತಲಾ 1 ಕಳವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿ.ಆರ್.ಕೌಶಿಕ್ ಎಂಬುವರು ಅ.26ರಂದು ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಬ್ಯಾಗಿನಲ್ಲಿ 73 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದವು. ಈ ಸಂಬಂಧ ಬಡಾವಣೆ ಠಾಣೆಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿಗಳ ಸುಳಿವು ಸಿಕ್ಕಿತ್ತು.
Kshetra Samachara
10/11/2024 07:22 pm