ಭೋಪಾಲ್: ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಿಹೋದ ಆರೋಪದಲ್ಲಿ ಮೂರು ಮಕ್ಕಳ ತಾಯಿಯನ್ನು ಕ್ರೂರವಾಗಿ ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ.
ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂತ್ರಸ್ತ ಮಹಿಳೆಯ ಪತಿ ಸೇರಿ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇಂಧೋರ್‌ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬುಡಕಟ್ಟು ಪ್ರಾಬಲ್ಯದ ಹಳ್ಳಿಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಸೋಮವಾರ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ದೇವಾಸ್ ಎಸ್‌ಪಿ ಶಿವ ದಯಾಳ್ ಸಿಂಗ್, ಸಂತ್ರಸ್ತೆಗೆ ಮದುವೆಯಾಗಿ 15 ವರ್ಷಗಳಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ವಾರದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದಳು. 35 ವರ್ಷದ ಮಹಿಳೆ ತನ್ನ ಪತಿ ಮತ್ತು ಮಕ್ಕಳನ್ನು ತೊರೆದು ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿಯೊಂದಿಗೆ ಯಾರಿಗೂ ತಿಳಿಸದೆ ಓಡಿ ಹೋಗಿದ್ದಳು. ಆಕೆಯ ಪತಿ ಮತ್ತು ಇತರ ಕುಟುಂಬಸ್ಥರು ಅವಳನ್ನು ಹುಡುಕಲು ಆರಂಭಿಸಿದರು ಮತ್ತು ನಂತರ ಪೊಲೀಸರನ್ನು ಸಂಪರ್ಕಿಸಿದರು. ಶನಿವಾರ, ಅವಳು ಇನ್ನೊಬ್ಬ ವ್ಯಕ್ತಿಯ ಮನೆಯಲ್ಲಿ ಕಾಣಿಸಿಕೊಂಡಿದ್ದಳು ಮತ್ತು ಗ್ರಾಮಸ್ಥರು ಆಕೆಯ ಪತಿ ಮತ್ತು ಅತ್ತೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲ್ಲಿಗೆ ದೌಡಾಯಿಸಿದ ಮಹಿಳೆಯ ಪತಿ, ಆತನ ಸಂಬಂಧಿಕರು ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಮಹಿಳೆಗೆ ಚಪ್ಪಲಿ, ಶೂ ಹಾರ ಹಾಕಿ, ಆಕೆಯ ಮೇಲೆ ಪತಿಯನ್ನು ಕೂರಿಸಿ ಮೆರವಣಿಗೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. "ತನಗೆ 15ನೇ ವಯಸ್ಸಿನಲ್ಲಿ ತನಗೆ ಮದುವೆಯಾಗಿದ್ದು, ಪತಿಯ ಕಿರುಕುಳದಿಂದ ಸ್ನೇಹಿತನ ಜೊತೆ ಹೋಗಿದ್ದೆ" ಎಂದು ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪತಿ ಸೇರಿದಂತೆ 12 ಜನರನ್ನು ಬಂಧಿಸಲಾಗಿದೆ. ಹಲ್ಲೆ, ಗಲಭೆ, ಮಹಿಳೆಯ ಮಾನಹಾನಿ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
PublicNext
05/07/2022 12:09 pm