ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಕಳೆದ ವಾರ ಒಂದೇ ಕುಟುಂಬದ 9 ಮಂದಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿತ್ತು. ಆರಂಭದಲ್ಲಿ ಇದು ಆತ್ಮಹತ್ಯೆ ಎನ್ನಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಬಿಗ್ ಶಾಕ್ ಎದುರಾಗಿದೆ. ಇದು ನಿಧಿಗಾಗಿ ನಡೆದ ಕೊಲೆ ಎಂಬುದು ಸದ್ಯ ಬೆಳಕಿಗೆ ಬಂದಿದೆ.
ಆರೋಪಿಗಳಾದ ಸೋಲಾಪುರದ ಸರ್ವದೇನಗರ ನಿವಾಸಿ, ಮಾಟಗಾರ ಅಬ್ಬಾಸ್ ಮೊಹಮ್ಮದ್ ಅಲಿ ಬಾಗವಾನ್ (48) ಮತ್ತು ಆತನ ಚಾಲಕ ವಸಂತ ವಿಹಾರ್ ಧ್ಯಾನೇಶ್ವರಿಯ ನಿವಾಸಿ ಧೀರಜ್ ಚಂದ್ರಕಾಂತ್ ಸುರವ್ಶೆ (39) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಸಾವಿಗೀಡಾದವರ ಮನೆಯಲ್ಲಿ ನಿಧಿ ಇದೆ ಎಂದು ಈ ದುರಂತಕ್ಕೆ ಕೈಹಾಕಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ (ಕೊಲ್ಹಾಪುರ ರೇಂಜ್) ಮನೋಜ್ ಕುಮಾರ್ ಲೋಹಿಯಾ ಮಾಹಿತಿ ನೀಡಿದ್ದಾರೆ.
ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಪೋಪಟ್ ವ್ಯಾನ್ಮೋರ್ (54), ಅವರ ಸಹೋದರ ಮತ್ತು ಪಶುವೈದ್ಯ ಡಾ. ಮಾಣಿಕ್ ವ್ಯಾನ್ಮೋರ್ (49), ಅವರ 74 ವರ್ಷದ ತಾಯಿ, ಪತ್ನಿಯರು ಮತ್ತು ನಾಲ್ವರು ಮಕ್ಕಳು ಜೂನ್ 21ರಂದು ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಗ್ರಾಮದ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. 1.5 ಕಿ.ಮೀ ಅಂತರದಲ್ಲಿರುವ ಎರಡು ಮನೆಗಳಲ್ಲಿ ಈ ಘಟನೆ ಜರುಗಿತ್ತು.
ಆರಂಭಿಕ ತನಿಖೆಯಲ್ಲಿ ಇಬ್ಬರು ಸಹೋದರರು ವಿವಿಧ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ ಎಂದು ತಿಳಿದು ಬಂದಿತ್ತು. ಹೀಗಾಗಿ ಸಾಲ ನೀಡಿದ್ದ 25 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಹಾಗೆ 13 ಮಂದಿಯನ್ನು ಬಂಧಿಸಿದ್ದರು. ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿರುವಾಗಲೇ ಮಾಟಗಾರನ ಕೃತ್ಯ ಬೆಳಕಿಗೆ ಬಂದಿದೆ.
PublicNext
28/06/2022 03:09 pm