ಬೆಂಗಳೂರು: ಹಣ ಅನ್ನೋದು ಏನು ಬೇಕಾದ್ರೂ ಆಟ ಆಡಿಸುತ್ತೆ. ಎಂತಹ ಸಂಬಂಧಗಳನ್ನೂ ಹಾಳು ಮಾಡಿ ಬಿಸಾಕುತ್ತೆ. ಗಂಭೀರ ಅಪರಾಧಗಳಿಗೆ ಕಾರಣವಾಗುತ್ತೆ ಅನ್ನೋದಕ್ಕೆ ಈ ಸುದ್ದಿಯೇ ಮತ್ತೊಂದು ಸಾಕ್ಷಿ.
ಟೇಲರ್ ಕೆಲಸ ಮಾಡಿಕೊಂಡು ಇದ್ದದ್ದರಲ್ಲೇ ನೆಮ್ಮದಿ ಕಂಡುಕೊಂಡಿದ್ದ ದಂಪತಿ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಏನೂ ಗಂಡ-ಹೆಂಡತಿ ನಡುವೆ ಸಮಸ್ಯೆ, ವೈಮನಸ್ಸು ಏನೇನೂ ಇರಲಿಲ್ಲ. ಆದ್ರೆ ಅವರಿಬ್ಬರ ಮಧ್ಯೆ ಚೀಟಿ ಹಣದ ವ್ಯವಹಾರ ಅಟಕಾಯಿಸಿಕೊಂಡಿದೆ. ಪರಿಣಾಮ ಶೀತಲವಾಗಿ ಶುರುವಾದ ಅಸಮಾಧಾನ ಹೆಂಡತಿಯ ಕೊಲೆಯಲ್ಲಿ ಅಂತ್ಯವಾಗಿದೆ.
ಯೆಸ್...ಹಣದ ವಿಚಾರವಾಗಿ ಬೆಂಗಳೂರು ನಗರದ ಮತ್ತಿಕೆರೆ ವಾರ್ಡ್‌ನ ನಾಲ್ಕನೇ ಮುಖ್ಯ ರಸ್ತೆಯ ಮನೆಯೊಂದರಲ್ಲಿ ಗಂಡನೇ ಹೆಂಡತಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಇದೇ ವೇಳೆ ಅಲ್ಲಿಯೇ ಇದ್ದ 14 ವರ್ಷದ ಮಗಳಿಗೂ ಈ ಪಾಪಿ ತಂದೆ ಮಚ್ಚಿನೇಟು ಕೊಟ್ಟಿದ್ದಾನೆ. ಆದ್ರೆ ಸತ್ತಂತೆ ನಟಿಸಿದ ಮಗಳು ಆ ದಿನ ರಾತ್ರಿ ಅಲ್ಲಿಯೇ ಮಲಗಿ ಬೆಳಗ್ಗೆದ್ದು ಆಚೆ ಬಂದಿದ್ದಾಳೆ!
ಇದೇ ಮತ್ತಿಕೆರೆ ನಾಲ್ಕನೇ ಮುಖ್ಯ ರಸ್ತೆಯ ಮನೆಯ ಹತ್ತಿರವೇ ಟೈಲರಿಂಗ್ ಶಾಪ್ ಹಾಕಿಕೊಂಡಿದ್ದ ಧನೇಂದ್ರ ಹಾಗೂ ಅನಸೂಯ ದಂಪತಿ ಉತ್ತಮ ಸಂಪಾದನೆಯನ್ನೂ ಮಾಡ್ತಾ ಇದ್ರು.
ಎಲ್ಲವೂ ಚೆನ್ನಾಗಿತ್ತು ಎನ್ನುವಷ್ಟರಲ್ಲಿ ಅನಸೂಯ ತನಗೆ ಗೊತ್ತಿರುವವರ ಬಳಿ ಚೀಟಿ ದುಡ್ಡು ಕಟ್ಟುತ್ತಿದ್ದಳು. ಆ ಹಣ ಬೆಳೆದು ಲಕ್ಷಾಂತರ ರೂಪಾಯಿ ಆಗಿತ್ತು. ಹೆಂಡತಿಗೆ ಗೊತ್ತಾಗದೇ ಗಂಡ ಧನೇಂದ್ರ ಆ ಚೀಟಿ ಹಣ ಪಡೆದಿದ್ದ ಎನ್ನಲಾಗಿದೆ. ಇದಕ್ಕೂ ಮುನ್ನ ಹೆಂಡತಿ ಅನಸೂಯ, ಪರಿ ಧನೇಂದ್ರನಿಗೆ ಸಾಲ ಕೊಟ್ಟಿದ್ದಳು. ಕೊಟ್ಟ ಸಾಲ ವಾಪಸ್ ಕೊಡು ಎಂದು ಅನಸೂಯ ಗಂಡನಿಗೆ ಡೆಡ್‌ಲೈನ್ ಕೊಟ್ಟಿದ್ದಳು. ಈ ಡೆಡ್‌ಲೈನ್ ಕೊಟ್ಟ ದಿನ ಹತ್ತಿರ ಬರುತ್ತಿದ್ದಂತೆ ಏನ್ ಮಾಡೋದು ಎಂಬ ಟೆನ್ಶನ್‌ನಲ್ಲಿ ಇದ್ದ ಧನೇಂದ್ರ ಇತ್ತೀಚೆಗೆ ಒಂದು ರಾತ್ರಿ ನಶೆ ಏರಿಸಿಕೊಂಡು ಮನೆಗೆ ಬಂದಿದ್ದಾನೆ. ಬಂದವನೇ ಸಾಲದ ವಿಚಾರವಾಗಿ ಹೆಂಡತಿ ಅನಸೂಯಾಳೊಂದಿಗೆ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಕುಪಿತಗೊಂಡ ಗಂಡ ಅನಸೂಯಾಳಿಗೆ ಮಚ್ಚಿನೇಟು ಕೊಟ್ಟಿದ್ದಾನೆ. ಪರಿಣಾಮ ಆಕೆ ಅಲ್ಲೇ ಅಸುನೀಗಿದ್ದಾಳೆ. ಇದನ್ನ ನೋಡಿದ 14 ವರ್ಷ ವಯಸ್ಸಿನ ಮಗಳ ಕತ್ತಿನ ಮೇಲೆ ಧನೇಂದ್ರ ಮಚ್ಚಿನೇಟು ಕೊಟ್ಟಿದ್ದಾನೆ. ಆದ್ರೆ ಆಕೆ ಸತ್ತಂತೆ ನಟಿಸಿ ಇಡೀ ರಾತ್ರಿ ಆ ಮನೆಯಲ್ಲೇ ಇದ್ದಾಳೆ. ಬೆಳಗ್ಗೆದ್ದು ಆಚೆ ಬಂದಾಗ ಈ ವಿಚಾರ ಗೊತ್ತಾಗಿದೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಮುಂದಿನ ಪಾಪಿ ಧನೇಂದ್ರನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
24/06/2022 08:51 pm