'ಸಾಮ್ರಾಟ್ ಪೃಥ್ವಿರಾಜ್' ಚಿತ್ರದ ಮೂಲಕ ಬಾಲಿವುಡ್ ಚೇತರಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಹುಸಿಯಾಗುತ್ತಿದೆ.
ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ನಟನೆಯ ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಚಿತ್ರವು ಜೂನ್ 3ರಂದು ವಿಶ್ವಾದ್ಯಂತ ರಿಲೀಸ್ ಆಗಿತ್ತು. ಸುಮಾರು 300 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಭರ್ಜರಿ ಗಳಿಕೆ ಮಾಡಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮೊದಲ ದಿನ 10+ ಕೋಟಿ ರೂ. ಗಳಿಸಿದೆ. ಎರಡನೇ ದಿನ 12+ ಕೋಟಿ ರೂ. ಗಳಿಕೆ ಆಗಿದೆ. ದಕ್ಷಿಣ ಭಾರತದಲ್ಲಿ 'ವಿಕ್ರಮ್' ಹವಾ ಜೋರಾಗಿದೆ. ಹಾಗಾಗಿ, 'ಸಾಮ್ರಾಟ್ ಪೃಥ್ವಿರಾಜ್'ಗೆ ಅಷ್ಟೊಂದು ಗಳಿಕೆ ಆಗಿಲ್ಲ.
ಮೊದಲ ವಾರಾಂತ್ಯದಲ್ಲಿ ಸುಮಾರು 39 ಕೋಟಿ ರೂ.ಗಳನ್ನು ಗಳಿಸಿದ ಚಿತ್ರಕ್ಕೆ ಸೋಮವಾರ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜೂನ್ 6ರಂದು ಚಿತ್ರವು ಸುಮಾರು 4.85 ಕೋಟಿ ರೂ.ಗಳಿಂದ 5.15 ಕೋಟಿ ರೂ.ಗಳಷ್ಟು ಮೊತ್ತವನ್ನು ಗಳಿಸಿದೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ.
ಚಿತ್ರವು ಮೊದಲ ದಿನ 10.70 ಕೋಟಿ ರೂ., ಎರಡನೇ ದಿನ 12.60 ಕೋಟಿ ರೂ. ಹಾಗೂ ಭಾನುವಾರದಂದು 16.10 ಕೋಟಿ ರೂ. ಮೊತ್ತವನ್ನು ಗಳಿಸಿತ್ತು. ಈ ಮೂಲಕ ಒಟ್ಟಾರೆ ಗಳಿಕೆ 44 ಕೋಟಿ ರೂ. ಆಗಿದ್ದು, ಮೊದಲ ವಾರದಲ್ಲಿ ಸುಮಾರು 60 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ.
‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಹಲವು ರಾಜ್ಯಗಳು ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದವು. ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ಹಿಂದಿ ಭಾಷಿಕ ರಾಜ್ಯಗಳು ತೆರಿಗೆ ವಿನಾಯಿತಿ ನೀಡಿದ್ದರೂ, ಜನರು ಚಿತ್ರ ವೀಕ್ಷಿಸಲು ಹೆಚ್ಚು ಆಸಕ್ತಿ ತೋರಿಸಿಲ್ಲ. ಹೀಗಾಗಿ ಗಳಿಕೆಯೂ ಏರುತ್ತಿಲ್ಲ. ಪರಿಣಾಮವಾಗಿ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಮೀಸಲಾದ ಸ್ಕ್ರೀನ್ಗಳು ಜನರ ಕೊರತೆಯಿಂದ ಇತರ ಚಿತ್ರಗಳ ಪಾಲಾಗುತ್ತಿವೆ.
PublicNext
07/06/2022 12:38 pm