ಲಕ್ನೋ: ವ್ಯಕ್ತಿಯೋರ್ವ ವಿರೋಧಿಗಳನ್ನು ಗಂಭೀರ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದ ತನ್ನ ಪತ್ನಿಯ ಮೇಲೆ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ ಆಘಾತಕಾರಿ ಹೀನ ಕೃತ್ಯವು ಉತ್ತರ ಪ್ರದೇಶದ ಬಾದೌನ್‌ನಲ್ಲಿ ಬೆಳಕಿಗೆ ಬಂದಿದೆ.
ಗಂಡ ತನ್ನ 22 ವರ್ಷದ ಪತ್ನಿಗೆ ಸುಳ್ಳು ಹೇಳಿ ಬೈಕ್‌ನಲ್ಲಿ ಕಾಡಿಗೆ ಕರೆದೊಯ್ದಿದ್ದಾನೆ. ನಿರ್ಜನ ಸ್ಥಳ ತಲುಪಿದ ಬಳಿಕ ಅಲ್ಲಿಗೆ ತನ್ನ ಸ್ನೇಹಿತನನ್ನೂ ಕರೆಸಿಕೊಂಡು ಪತ್ನಿ ಮೇಲೆ ಅತ್ಯಾಚಾರ ಮಾಡುವಂತೆ ಸೂಚಿಸಿದ್ದಾನೆ. ಈ ದುಷ್ಕೃತ್ಯಕ್ಕೆ ಬಲಿಯಾದ ಹೆಂಡತಿ ಪತಿಯ ಸ್ನೇಹಿತನಿಂದ ಎರಡು ಬಾರಿ ಅತ್ಯಾಚಾರಕ್ಕೊಳಗಾಗಿದ್ದಾಳೆ. ನಂತರ ಪತಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಕರೆ ಮಾಡಿ, ಪತ್ನಿ ಮೇಲೆ ಇಬ್ಬರು ಅತ್ಯಾಚಾರ ಎಸಗಿರುವುದಾಗಿ ದೂರು ನೀಡಿದ್ದಾನೆ.
ಈ ಕುರಿತು ದೂರು ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಪತ್ನಿ ನಡೆದ ಸತ್ಯ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ತನ್ನ ಪತಿ ಇಬ್ಬರನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸುವ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾಳೆ. ಇದರಿಂದ ಆಘಾತಗೊಂಡ ಪೊಲೀಸರು, ತಡ ಮಾಡದೇ ಆರೋಪಿ ಪತಿಯನ್ನು ಬಂಧಿಸಿದ್ದಾರೆ.ಇನ್ನು ಆತನ ಸ್ನೇಹಿತ ಪರಾರಿಯಾಗಿದ್ದು, ಆತನಿಗೆ ಬಲೆ ಬೀಸಿದ್ದಾರೆ.
PublicNext
02/05/2022 02:50 pm