ಗದಗ: ಗ್ರಾಮ ಪಂಚಾಯತ ಮಾಜಿ ಸದಸ್ಯನಿಂದ ಮಹಿಳೆ ಮೇಲೆ ಅತ್ಯಾಚಾರದ ಆರೋಪವೊಂದು ಕೇಳಿ ಬಂದಿದ್ದು, ಗದಗ ನಗರದ ಎಸ್ಪಿ ಆಫೀಸ್ ಎದುರು ಪೆಟ್ರೋಲ್ ಹಿಡಿದುಕೊಂಡು ಸಂತ್ರಸ್ತೆಯ ಧರಣಿ ನಡೆಸುತ್ತಿದ್ದಾಳೆ.
ಹೌದು.ಕಳೆದ ಐದಾರು ವರ್ಷಗಳಿಂದ ನಿರಂತರ ಅತ್ಯಾಚಾರ ಮಾಡಿರುವ ಆರೋಪವೊಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಕಾರಬಾರಿ ಮೇಲೆ ಕೇಳಿ ಬಂದಿದೆ. ಗದಗ ತಾಲೂಕಿನ ಮಹಾಲಿಂಗಪೂರ ತಾಂಡಾ ನಿವಾಸಿ ಚಂದ್ರು ಕಾರಬಾರಿ ಎಂಬುವವನೇ ಮಹಿಳೆಗೆ ಐದಾರು ವರ್ಷಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾಗಿ ಆರೋಪಿಸಿರು ಮಹಿಳೆಯು, ಎಸ್ಪಿ ಆಫೀಸ್ ಎದುರಿನಲ್ಲಿ ಧರಣಿಗೆ ಮುಂದಾಗಿದ್ದಾಳೆ.
ಚಂದ್ರು ಕಾರಬಾರಿ ಮೇಲೆ ಪ್ರಕರಣ ದಾಖಲಿಸಿದ್ರೂ ಕ್ರಮ ಕೈಗೊಳ್ಳದ ಮುಳಗುಂದ ಠಾಣೆಯ ಪೊಲೀಸರ ವಿರುದ್ಧ ಸಂತ್ರಸ್ತೆಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಳಗುಂದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಿರ್ಲಕ್ಷ್ಯದ ಬಗ್ಗೆ ಗಂಭೀರವಾಗಿ ಆರೋಪ ಮಾಡುತ್ತಿರುವ ಕುಟುಂಬದವರು ಏಕಾಏಕಿ ಎಸ್ಪಿ ಆಫೀಸ್ ಎದುರಿನಲ್ಲಿ ಧರಣಿ ನಡೆಸುತ್ತಿದ್ದಾರೆ.
ಮಹಿಳೆಯ ಅಶ್ಲೀಲ ದೃಶ್ಯಗಳ ವೀಡಿಯೋ ಮಾಡಿರುವ ಚಂದ್ರು, ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ಮಹಿಳೆ ಅಳಲನ್ನು ತೋಡಿಕೊಂಡಿದ್ದಾಳೆ. ಸಂತ್ರಸ್ತೆಯಿಂದ ಮುಳಗುಂದ ಪೊಲೀಸ್ ಠಾಣೆಯಲ್ಲಿ ಚಂದ್ರು ಕಾರಬಾರಿ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿರುವ ಸಂತ್ರಸ್ತೆಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ.
ಸುದ್ಧಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್ ಅವರ ಮುಂದೆ ನ್ಯಾಯಕೊಡಿಸುವಂತೆ ಸಂತ್ರಸ್ತೆ ಕಣ್ಣೀರು ಹಾಕಿದ್ದಾಳೆ. ಅಲ್ಲದೇ ಮುಳಗುಂದ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಗ್ರಾ.ಪಂ ಮಾಜಿ ಸದಸ್ಯನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾಳೆ.
PublicNext
10/04/2022 11:13 am