ಬೆಳಗಾವಿ: ಸಾರ್ವಜನಿಕವಾಗಿ ಪತ್ನಿಯನ್ನೇ ಪತಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ. ಬೆಳಗಾವಿಯ ಕೋಟೆ ಕೆರೆ ಬಳಿ ಮಧ್ಯಾಹ್ನ ಎರಡು ಗಂಟೆಗೆ ಈ ಘಟನೆ ನಡೆದಿದೆ. ಹೀನಾ ಕೌಸರ್ ಮಂಜೂರ್ ಇಲಾಹಿ ನದಾಫ್ (27) ಎಂಬುವವರೇ ಕೊಲೆಯಾದ ದುರ್ದೈವಿ.
ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿ ಮಂಜೂರ್ ಇಲಾಹಿ ನದಾಫ್ (34) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಗಾಂಧಿನಗರದ ಹೀನಾಕೌಸರ್ ಎಂಬಾಕೆ ಕಳೆದ ನಾಲ್ಕು ವರ್ಷಗಳ ಹಿಂದೆ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಮಂಜೂರ್ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ತಾಯಿ ಮೃತಪಟ್ಟಿದ್ದು, ತಂದೆ ಜೈಲು ಪಾಲಾದ ಕಾರಣಕ್ಕೆ ನಾಲ್ಕು ವರ್ಷದ ಮಗು ಈಗ ಅನಾಥವಾಗಿದೆ.
ಮಂಜೂರ್-ಹೀನಾಕೌಸರ್ ನಡುವೆ ಕೌಟುಂಬಿಕ ಕಲಹವಿತ್ತು. ಈ ಕಾರಣಕ್ಕೆ ಕಳೆದ ಎಂಟು ತಿಂಗಳ ಹಿಂದೆ ಹೀನಾಕೌಸರ್ ವಿಚ್ಛೇದನ ಕೋರಿ ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಕೋರ್ಟ್ ಗೆ ಹಾಜರಾಗಿ ಗಾಂಧಿನಗರದಲ್ಲಿರುವ ತವರು ಮನೆಗೆ ಹೀನಾಕೌಸರ್ ವಾಪಸ್ ಆಗುತ್ತಿದ್ದರು. ಈ ವೇಳೆ ಕೋಟೆ ಕೆರೆ ಬಳಿ ಆಗಮಿಸಿದ ಮಂಜೂರ್, ನಡೆದುಕೊಂಡು ಹೋಗುತ್ತಿದ್ದ ಹೀನಾಕೌಸರ್ ಅವರನ್ನು ಅಡ್ಡಗಟ್ಟಿದ್ದಾನೆ. ಕೆಲ ಹೊತ್ತು ಹೀನಾಕೌಸರ್ ಜೊತೆಗೆ ವಾಗ್ವಾದವನ್ನೂ ಮಾಡಿದ್ದಾನೆ. ಬಳಿಕ ಹೀನಾಕೌಸರ್ ಕುತ್ತಿಗೆ, ಕೈಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ವಿಲವಿಲನೇ ಒದ್ದಾಡುತ್ತಿದ್ದ ಆಕೆಯನ್ನು, ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಮಾರ್ಗ ಮಧ್ಯೆಯೇ ಹೀನಾಕೌಸರ್ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಮಾರ್ಕೇಟ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು.
PublicNext
26/03/2022 10:03 am