ದಾವಣಗೆರೆ: ನಗರದ ಹೊರವಲಯದ ಎಲೇಬೇತೂರು ಗ್ರಾಮದಲ್ಲಿ ವೃದ್ಧ ದಂಪತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.
ಗುರುಸಿದ್ಧಯ್ಯ ಹಾಗೂ ಸರೋಜಮ್ಮ ಕೊಲೆಗೀಡಾದ ವೃದ್ಧ ದಂಪತಿ ಎಂದು ಗುರುತಿಸಲಾಗಿದೆ. ದಾವಣಗೆರೆ ತಾಲೂಕಿನ ಎಲೇಬೇತೂರು ಗ್ರಾಮದಲ್ಲಿ ತಡರಾತ್ರಿ ಹತ್ಯೆ ಮಾಡಿ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
82 ವರ್ಷದ ಗುರುಸಿದ್ದಯ್ಯ, 74 ವರ್ಷದ ಸರೋಜಮ್ಮ ದಂಪತಿ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು.ಮನೆಯಲ್ಲಿ ಗುರುಸಿದ್ಧಯ್ಯ, ಸರೋಜಮ್ಮ ಇಬ್ಬರೇ ವಾಸ ಆಗಿದ್ದರು. ತಡರಾತ್ರಿ ಮನೆಗೆ ನುಗ್ಗಿರುವ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಬೆಳಿಗ್ಗೆ ಮನೆ ಬಾಗಿಲು ತೆರೆದಿರುವುದನ್ನು ನೋಡಿದ ಮಹಿಳೆಯು ಮನೆಯೊಳಗೆ ಹೋದಾಗ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಹಿಳೆ ಮಾಹಿತಿ ನೀಡಿದ್ದಾರೆ. ಹಣಕ್ಕಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.
PublicNext
25/01/2022 01:26 pm