ಚಿತ್ರದುರ್ಗ: ವ್ಯಕ್ತಿಯೋರ್ವ ಬುದ್ಧಿವಾದ ಹೇಳಿದ ಪತ್ನಿಯನ್ನು ಕೊಂದು ಬಚ್ಚಲು ಮನೆಯಲ್ಲಿ ಹೂತಿಟ್ಟು ಕಾಣೆಯಾಗಿದ್ದಾಳೆ ಅಂತ ದೂರು ಕೊಟ್ಟಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ.
ನಾರಪ್ಪ (40 ) ಪತ್ನಿ ಸುಮಾಳನ್ನು ಕೊಲೆಗೈದು ಬಚ್ಚಲು ಮನೆಯಲ್ಲಿ ಹೂತಿಟ್ಟಿದ್ದ. ಈ ಘಟನೆ ಚಿತ್ರದುರ್ಗ ತಾಲೂಕು ಕೋಣನೂರು ಗ್ರಾಮದಲ್ಲಿ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದ ನಾರಪ್ಪನನ್ನು ದಾವಣಗೆರೆ ಬಸ್ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಾರಪ್ಪ ಎಷ್ಟೇ ಹೇಳಿದರೂ ಕೇಳದೇ ಮದ್ಯ ಸೇವನೆ, ಇಸ್ಪೀಟು ಆಟಕ್ಕೆ ಹಣ ಕಳೆಯುತ್ತಿದ್ದ. ಇದೇ ಹಿನ್ನೆಲೆಯಲ್ಲಿ ಪತ್ನಿ ಹೀಗೆ ಮಾಡಬೇಡಿ, ಮಗನ ಭವಿಷ್ಯಕ್ಕೆ ಹಣ ಉಳಿಸಿ ಅಂತ ಬುದ್ಧಿ ಮಾತು ಹೇಳಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಡಿ.25 ರಂದು ದಂಪತಿ ಮಧ್ಯೆ ಗಲಾಟೆ ನಡೆದಿದ್ದು, ಪತ್ನಿ ಮೇಲೆ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಹಲ್ಲೆ ಹಿನ್ನೆಲೆಯಲ್ಲಿ ಪತ್ನಿ ಸಾವನ್ನಪ್ಪಿದ್ದರಿಂದ, ಆಕೆಯ ಶವವನ್ನು ಹೂತಿಟ್ಟು ಪತ್ನಿ ಕಾಣೆಯಾಗಿದ್ದಾಳೆ ಅಂತ ನಾರಪ್ಪ ಡ್ರಾಮಾ ಮಾಡಿದ್ದ ಎನ್ನಲಾಗಿದೆ. ಆದರೆ ಕೊಲೆ ಪ್ರಕರಣ ದಾಖಲಾಗಿ 48 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
PublicNext
09/01/2022 07:19 pm