ಬೆಂಗಳೂರು: ಮಹಾನಗರದ ಮಂದಿ ಜಾಲಿ ರೈಡ್, ಲಾಂಗ್ ಡ್ರೈವ್ ಅಂತೆಲ್ಲ ಹೋಗೋದು ಕಾಮನ್. ಆದ್ರೆ ಈ ನಡುವೆ ಕೆಲವು ಬೀದಿ ಕಾಮಣ್ಣರಿಗೆ ಒಂಟಿ ಮಹಿಳೆ ಏನಾದ್ರೂ ಸಿಕ್ರೆ ಕೊಡಬಾರದ ಕಾಟ ಕೊಡ್ತಾರೆ. ಅಂತದ್ದೊಂದು ಘಟನೆ ಈಗ ಬೆಂಗಳೂರಿನಲ್ಲಿ ನಡೆದಿದ್ದು ಅದರ ವಿಡಿಯೋ ವೈರಲ್ ಆಗುತ್ತಿದೆ.
ದೀಪಾ ಶ್ರೀಕುಮಾರ್ ಎಂಬುವವರು ಶುಕ್ರವಾರ ತಡರಾತ್ರಿ ಹೊಸಕೋಟೆಯ ತಮ್ಮ ಸಂಬಂಧಿಕರ ಮನೆಗೆ ಹೋಗಿ ವಾಪಸ್ ತೆರಳುತ್ತಿದ್ದರು. ಮಕ್ಕಳನ್ನು ಕೂರಿಸಿಕೊಂಡು ತಾವೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯೆ ಕಾರ್ ಪಂಕ್ಚರ್ ಆಗಿದೆ. ಹೀಗಾಗಿ ದೀಪಾ ಅವರು ಕಾರಿನ ಟೈರ್ ಬದಲಿಸುವಾಗ ಅಲ್ಲಿ ಬೇರೊಂದು ಕಾರು ಚಲಾಯಿಸಿಕೊಂಡು ಬಂದ ಬೀದಿ ಕಾಮಣ್ಣನೊಬ್ಬ ದೀಪಾ ಅವರ ಕಾರಿನೊಳಗಿದ್ದ ಪುತ್ರಿಯನ್ನು ಅಸಭ್ಯ ಪ್ರಶ್ನೆ ಕೇಳಿದ್ದಾನೆ. ಇದರಿಂದ ಕೋಪಹಗೊಂಡ ದೀಪಾ, ಆತನನ್ನು ಬೈದು ಮುಂದೆ ಸಾಗಿದ್ದಾರೆ.
ಇಷ್ಟಾದರೂ ಸುಮ್ಮನೇ ಬಿಡದ ಆತ ದೀಪಾ ಅವರ ಕಾರನ್ನು ಸುಮಾರು ಹೊತ್ತು ಚೇಸ್ ಮಾಡಿದ್ದಾನೆ. ಕೆಲವೊಮ್ಮೆ ಕಾರಿಗೆ ತನ್ನ ಕಾರನ್ನು ಅಡ್ಡ ಚಲಾಯಿಸಿ ತೊಂದರೆ ಕೊಟ್ಟಿದ್ದಾನೆ. ಇಷ್ಟರಲ್ಲಿ ದೀಪಾ ಅವರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಹೀಗೆ ಚೇಸ್ ಮಾಡಿಕೊಂಡು ಬಂದ ವ್ಯಕ್ತಿ ಗೊರಗುಂಟೆಪಾಳ್ಯದವರೆಗೂ ಬಂದು ಅಲ್ಲಿ ಪೊಲೀಸರು ನಿಂತಿದ್ದನ್ನು ಗಮನಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಈ ಬಗ್ಗೆ ದೀಪಾ ಶ್ರೀಕುಮಾರ್ ಆರ್‌ಎಂಸಿ ಯಾರ್ಡ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಬೀದಿ ಕಾಮಣ್ಣನಿಗಾಗಿ ಬಲೆ ಬೀಸಿದ್ದಾರೆ.
PublicNext
12/12/2021 05:55 pm