ಗುವಾಹಟಿ: ತ್ರಿಪುರ ಸ್ಟೇಟ್ ರೈಫಲ್ಸ್‌ನ ಯೋಧರೊಬ್ಬರು ಇಂದು (ಶನಿವಾರ) ಸರ್ವಿಸ್ ರೈಫಲ್‌ನಿಂದ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಯೋಧ ಸುಕಾಂತ್ ದಾಸ್(38) ಅವರು ಸುಬೇದಾರ್ ಮಾರ್ಕಾ ಸಿಂಗ್ ಜಮಾತಿಯಾ (47) ಮತ್ತು ನಾಯೆಬ್ ಸುಬೇದಾರ್ ಕಿರಣ್ ಜಮಾತಿಯಾ (37) ಅವರೊಂದಿಗೆ ಕೆಲವು ಕಾರಣಗಳಿಗಾಗಿ ಜಗಳವಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಯೋಧ ಸುಕಾಂತ ದಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜಗಳದ ವೇಳೆ ಸುಕಾಂತ್ ದಾಸ್ ತಮ್ಮ ಸರ್ವಿಸ್ ರೈಫಲ್‌ನಿಂದ ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಸುಬೇದಾರ್ ಮಾರ್ಕಾ ಸಿಂಗ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಜಮಾತಿಯಾ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ನಂತರ, ಗುಂಡಿನ ದಾಳಿ ನಡೆಸಿದ ಯೋಧನನ್ನು ನಿಶ್ಯಸ್ತ್ರಗೊಳಿಸಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಇವರೆಲ್ಲರನ್ನು ಕೊನಬಾನ್‌ನಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಡ್ರಿಲ್ಲಿಂಗ್ ಸ್ಥಳದಲ್ಲಿ ನಿಯೋಜಿಸಲಾಗಿತ್ತು.
PublicNext
04/12/2021 09:18 pm