ಹಾಸನ: ಹಾಸನ: ಹುಟ್ಟುಹಬ್ಬದ ದಿನದಂದು ಪ್ರೇಯಸಿ ಸಿಗಲಿಲ್ಲವೆಂಬ ಕಾರಣಕ್ಕೆ ಮನನೊಂದ ಯುವಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿ ನಡೆದಿದೆ.
ಜೀವಿತ್ (29) ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ. ಜೀವಿತ್ ತಮ್ಮದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಮನೆಯವರ ಒತ್ತಡದಿಂದ ಆಕೆ ತನ್ನನ್ನು ನಿರಾಕರಿಸುತ್ತಿದ್ದಾಳೆ. ಒಂಬತ್ತು ವರ್ಷಗಳಿಂದ ಆಕೆಯ ಹುಟ್ಟುಹಬ್ಬಕ್ಕೆ ನಾನೇ ಕೇಕ್ ಕಟ್ ಮಾಡಿಸುತ್ತಿದ್ದೆ. ಆಕೆಗೆ ಮೊದಲ ಶುಭಾಶಯ ಹೇಳುತ್ತಿದ್ದದ್ದು ಕೂಡ ನಾನೇ ಎಂದಿರುವ ಜೀವಿತ್, ನಿನ್ನೆ ಹುಟ್ಟುಹಬ್ಬದಂದು ಆಕೆ ಸಿಗದಿದ್ದಕ್ಕೆ ಮನನೊಂದು ವಿಷ ಕುಡಿದಿದ್ದಾನೆ.
ಅಸ್ವಸ್ಥಗೊಂಡಿರುವ ಜೀವಿತ್ಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ತನ್ನನ್ನೇ ಮದುವೆಯಾಗಬೇಕು, ಇಲ್ಲ ತನಗಾದ ಮೋಸಕ್ಕೆ ನ್ಯಾಯ ಸಿಗಬೇಕು ಎಂದು ನೊಂದ ಪ್ರೇಮಿ ಅಳಲು ತೊಡಿಕೊಂಡಿದ್ದಾನೆ. ಇತ್ತ ಯುವತಿಯ ಪೋಷಕರು, ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಮಗಳಿಗೆ ಪೀಡಿಸುತ್ತಿದ್ದಾನೆಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಯುವಕ ಜೀವಿತ್ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ಗಂಡಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
PublicNext
28/11/2021 08:50 am