ಬೆಂಗಳೂರು: ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡಿದ್ದರಿಂದ ಕೆರಳಿದ ಕಾರಿನ ಮಾಲೀಕ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.
ಹಲ್ಲೆ ನಡೆಸಿದ ಕಾರು ಮಾಲೀಕ ಚಾರ್ಲ್ಸ್ ಕೃತ್ಯದ ಬಳಿ ಪರಾರಿಯಾಗಿದ್ದಾನೆ. ಇನ್ನು ನಾಯಿ ಸಾಕಿದ್ದ ಹೆಚ್‍ಎಎಲ್ ನಿವೃತ್ತ ಉದ್ಯೋಗಿ ಗೇರಿ ರೋಜಾರಿಯೋ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗಿದ್ದಾದರೂ ಏನು ಗೊತ್ತಾ?
ಗೇರಿ ರೋಜಾರಿಯೋ ತಮ್ಮ ನಾಯಿಯನ್ನು ಭಾನುವಾರ ರಾತ್ರಿ 11 ಗಂಟೆಗೆ ಹೊರಗಡೆ ಬಿಟ್ಟಿದ್ದರು. ಈ ವೇಳೆ ನಾಯಿ ಎದುರುಗಡೆ ರಸ್ತೆಯ ಚಾರ್ಲ್ಸ್ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದೆ. ಈ ವಿಚಾರವಾಗಿ ಎರಡು ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇಷ್ಟಕ್ಕೆ ರೊಚ್ಚಿಗೆದ್ದ ಕಾರು ಮಾಲೀಕ ಚಾರ್ಲ್ಸ್ ಎರಡನೇ ಮಹಡಿಯಿಂದ ಕಲ್ಲು ತೆಗೆದು ವೃದ್ಧ ಗೇರಿ ರೋಜಾರಿಯೋಗೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗೇರಿ ರೋಜಾರಿಯೋ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.
ಕಲ್ಲು ಬಿದ್ದ ರಭಸಕ್ಕೆ ಗೇರಿ ರೋಜಾರಿಯ ಅವರ ಗದ್ದಕ್ಕೆ ಗಂಭೀರ ಗಾಯವಾಗಿದೆ. ಅಷ್ಟೇ ಅಲ್ಲದೆ ಎರಡು ಹಲ್ಲುಗಳು ಮುರಿದಿದ್ದು, ಕಣ್ಣುಗಳು ಮಂಜಾಗಿ ಕಾಣುತ್ತಿವೆ. ಈ ಸಂಬಂಧ ಗೇರಿ ರೋಜಾರಿಯೋ ಅವರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಚಾರ್ಲ್ಸ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
PublicNext
23/11/2021 12:01 pm