ಬೆಳಗಾವಿ: ಬೈಕ್ ಡಿಕ್ಕಿ ಹೊಡೆದಿದಕ್ಕೆ ಆಕ್ರೋಶಗೊಂಡ ಪದಾಚಾರಿಯೊಬ್ಬ ಬೈಕ್ ಸವಾರನನ್ನೇ ಹೊಡೆದು ಕೊಲೆಗೈದ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದ ಚೌಕಿಮಠ ಕ್ರಾಸ್ ಬಳಿ ನಡೆದಿದೆ.
ವಿಜಯಮಹಾಂತೇಶ್ ಹಿರೇಮಠ (70) ಕೊಲೆಯಾದ ಬೈಕ್ ಸವಾರ. ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದ ಅದೃಶ್ಯ ಕೊಲೆಗೈದ ಆರೋಪಿ.
ಕಿತ್ತೂರು ಪಟ್ಟಣದ ಚೌಕಿಮಠ ಕ್ರಾಸ್ ಬಳಿ ವಿಜಯಮಹಾಂತೇಶ್ ಹಿರೇಮಠ ಅವರ ಬೈಕ್‌ಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದಿದೆ. ಆಗ ನಿಯಂತ್ರಣ ತಪ್ಪಿದ ಬೈಕ್ ಪಾದಚಾರಿ ಅದೃಶ್ಯಗೆ ಗುದ್ದಿದೆ. ಇದರಿಂದ ಕೋಪಗೊಂಡ ಅದೃಶ್ಯ ಹಾಗೂ ಆತನ ಸ್ನೇಹಿತರು ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ವಿಜಯ ಮಹಾಂತೇಶ್ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ವಿಜಯ ಮಹಾಂತೇಶ್ ಸಾವನ್ನಪ್ಪಿದ್ದಾರೆ.
ಈ ಘಟನೆಯ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಿತ್ತೂರು ಪೊಲೀಸರು ಆರೋಪಿ ಅದೃಶ್ಯನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
28/10/2021 04:54 pm